ಗೋಣಿಕೊಪ್ಪಲು, ಜು. ೨೮: ಚುನಾವಣಾ ಸಂದರ್ಭದಲ್ಲಿ ನೂತನ ತಾಲೂಕಿಗೆ ವಸತಿ ಶಾಲೆಯನ್ನು ಮಂಜೂರು ಮಾಡಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ತಮ್ಮ ಒಂದು ವರ್ಷದ ಶಾಸಕ ಅವಧಿಯಲ್ಲಿ ತಮ್ಮ ತವರು ಕ್ಷೇತ್ರ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಗೆ ವಸತಿ ಶಾಲೆಯನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಸತಿ ಶಾಲೆಗಾಗಿ ವೀರಾಜಪೇಟೆ ಬಳಿಯ ಬಾಳುಗೋಡುವಿನ ಏಕಲವ್ಯ ವಸತಿ ಶಾಲೆ ಹಾಗೂ ಆರ್ಜಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯನ್ನೆ ಅವಲಂಬಿಸಿದ್ದರು. ಇದೀಗ ಶಾಸಕ ಪೊನ್ನಣ್ಣ ಅವರ ವಿಶೇಷ ಆಸಕ್ತಿಯಿಂದ ಮಂಜೂರಾಗಿರುವ ವಸತಿ ಶಾಲೆಯು ಹುದಿಕೇರಿ ಭಾಗದಲ್ಲಿ ಪ್ರಾರಂಭವಾಗುವುದರಿAದ ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ಬಾಳೆಲೆ, ಟಿ. ಶೆಟ್ಟಿಗೇರಿ, ಪೊನ್ನಂಪೇಟೆ ಭಾಗದ ವಿದ್ಯಾರ್ಥಿಗಳಿಗೆ ವಸತಿ ಶಾಲೆಯು ಪ್ರಯೋಜನವಾಗಲಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಶಾಸಕ ಪೊನ್ನಣ್ಣನವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಲು ಉತ್ತಮ ಮಟ್ಟದ ವಸತಿ ಶಾಲೆಯನ್ನು ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಇದೀಗ ಸರ್ಕಾರ ವಸತಿ ಶಾಲೆಯನ್ನು ಮಂಜೂರು ಮಾಡಿದೆ.

ವಸತಿ ಶಾಲೆ ನಿರ್ಮಾಣಗೊಳ್ಳಲು ೮ ರಿಂದ ೧೦ ಎಕರೆ ಜಮೀನಿನ ಅವಶ್ಯಕತೆಯಿದ್ದು, ಈಗಾಗಲೇ ಜಮೀನು ಗುರುತಿಸುವಿಕೆಗೆ ಶಾಸಕ ಪೊನ್ನಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ರಾಜ್ಯದ ೩೧ ಜಿಲ್ಲೆಗಳು ೨೩೧ ತಾಲೂಕುಗಳಲ್ಲಿ ೭೭೦ ಹೋಬಳಿಗಳ ಪೈಕಿ, ಪರಿಶಿಷ್ಟ ಜಾತಿ-೫೦೩, ಪರಿಶಿಷ್ಟ ವರ್ಗದ-೧೪೪ ಹಾಗೂ ಹಿಂದುಳಿದ ವರ್ಗದ ೧೭೪ ವಸತಿ ಶಾಲೆಗಳು ಸೇರಿದಂತೆ ರಾಜ್ಯದಲ್ಲಿ ೮೨೧ ವಸತಿ ಶಾಲೆ ಕಾರ್ಯ ನಿರ್ವಹಿಸುತ್ತಿವೆ. ೧೧೪ ಹೋಬಳಿಗಳಲ್ಲಿ ವಸತಿ ಶಾಲೆಯು ಲಭ್ಯವಿರುವುದಿಲ್ಲ. ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಇದೀಗ ಸರ್ಕಾರವು ವಸತಿ ಶಾಲೆಯನ್ನು ತೆರೆಯಲು ಆದೇಶ ನೀಡಿದೆ. ಇದರಿಂದ ಬಹು ವರ್ಷಗಳ ಬೇಡಿಕೆಯಾಗಿದ್ದ ವಸತಿ ಶಾಲೆಯ ಯೋಜನೆಯು ಪೊನ್ನಂಪೇಟೆ ತಾಲೂಕಿಗೆ ಮಂಜೂರಾಗಿರುವುದು ವಿಶೇಷವಾಗಿದೆ.

ಸರ್ಕಾರದಿಂದ ಮಂಜೂರಾಗಿರುವ ವಸತಿ ಶಾಲೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರÀದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ತವರು ಕ್ಷೇತ್ರ ಹುದಿಕೇರಿ ಹೋಬಳಿಯ ಹುದಿಕೇರಿಯಲ್ಲಿಯೇ ನೂತನ ವಸತಿ ಶಾಲೆಯು ಪ್ರಾರಂಭವಾಗಲಿದೆ. ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿಗಳಾದ ಎಂ. ಸುಮಿತ್ರ ನೂತನ ವಸತಿ ಶಾಲೆಯ ಮಂಜೂರಾತಿ ಬಗ್ಗೆ ಆದೇಶ ಹೊರಡಿಸಿದ್ದಾರೆ.

- ಹೆಚ್.ಕೆ. ಜಗದೀಶ್