ಸೋಮವಾರಪೇಟೆ, ಜು. ೨೯: ಕಳೆದ ಎರಡು ವಾರದಿಂದ ಅಬ್ಬರಿಸುತ್ತಿದ್ದ ಗಾಳಿ-ಮಳೆ ಕೊಂಚ ತಣ್ಣಗಾಗಿದೆ. ಅಬ್ಬರ ಕಡಿಮೆಯಾದ ಹಿನ್ನೆಲೆ ಕೃಷಿಕರು ಗದ್ದೆ-ತೋಟಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಭಾರೀ ಮಳೆ ಗಾಳಿಗೆ ತೋಟಗಳಲ್ಲಿ ನೂರಾರು ಮರಗಳು ಕೆಳಕ್ಕುರುಳಿದ್ದು, ಕಾಫಿ ಗಿಡಗಳು ಮುರಿದಿವೆ. ಗಾಳಿಯ ತೀವ್ರತೆ ಯಿಂದಾಗಿ ತೋಟದೊಳಗೆ ತೆರಳಲು ಹಿಂದೇಟು ಹಾಕಿದ್ದ ಕೃಷಿಕರು ನಿನ್ನೆಯಿಂದ ಸ್ವಲ್ಪ ನಿರಾಳರಾಗಿದ್ದಾರೆ. ತೋಟದೊಳಗೆ ಬಿದ್ದಿರುವ ಮರಗಳನ್ನು ಯಂತ್ರಗಳ ಮೂಲಕ ಕತ್ತರಿಸುವ ಕೆಲಸ ಮಾಡಲಾಗುತ್ತಿದೆ. ಮರ ಕಟಾವು ಮಾಡುವ ಕಾರ್ಮಿ ಕರು ಕೆಲಸದಲ್ಲಿ ‘ಬ್ಯುಸಿ’ಯಾಗಿದ್ದಾರೆ.
ವಾತಾವರಣದಲ್ಲಿನ ಶೀತಕ್ಕೆ ಈಗಾಗಲೇ ಹೆಚ್ಚಿನ ಹಾನಿ ಸಂಭವಿಸಿದೆ. ಕಾಫಿ ತೋಟದಲ್ಲಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾಫಿ ಕಾಯಿಗಳು ಅತೀ ಶೀತದಿಂದ ನೆಲಕ್ಕೆ ಬಿದ್ದಿದ್ದು, ಕರಿಮೆಣಸು ಗೆರೆಗಳು ಮಣ್ಣು ಪಾಲಾಗಿವೆ. ಈ ಬಾರಿ ಬಹುತೇಕ ಎಲ್ಲಾ ಭಾಗದಲ್ಲೂ ಉತ್ತಮ ಕರಿಮೆಣಸು ಫಸಲು ನಿರೀಕ್ಷೆ ಮಾಡಲಾಗಿತ್ತು. ಆದರೆ ಕುಂಭದ್ರೋಣದ ಮಳೆಗೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿ, ಬೆಳೆಗಾರ ವರ್ಗದ ಮೊಗದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದೆ.
ಸದ್ಯದ ಮಟ್ಟಿಗೆ ಹಾನಿಯನ್ನು ಅಂದಾಜಿಸುವುದೇ ಕಷ್ಟಕರವಾಗಿದೆ. ಕಾಫಿ ಗಿಡಗಳು, ಅಳಿದುಳಿದಿರುವ ಕಾಫಿ ಕಾಯಿಗಳನ್ನು ಕೊಳೆರೋಗದಿಂದ ಕಾಪಾಡಿಕೊಳ್ಳುವ ಸವಾಲು ಬೆಳೆಗಾರರ ಎದುರಿದೆ. ಕರಿಮೆಣಸಿನ ಬಗ್ಗೆ ಹೆಚ್ಚು ಆಸೆ ಇಟ್ಟುಕೊಂಡಿದ್ದ ಮಂದಿಗೆ ನಿರಾಸೆಯಾಗಿದೆ.ಇನ್ನು ಹೊಳೆ ತೊರೆಗಳು, ನದಿಗಳು ತುಂಬಿ ಹರಿದ ಪರಿಣಾಮ ನದಿಪಾತ್ರದ ಗದ್ದೆಗಳು ಮರಳು ಮಣ್ಣಿನಿಂದ ಆವೃತ್ತವಾಗಿವೆ. ಕೆಲವೆಡೆ ನಾಟಿ ಮಾಡಿದ್ದ ಗದ್ದೆಗಳಿಗೆ ನೀರು ನುಗ್ಗಿದ್ದರೆ, ಇನ್ನು ಕೆಲವೆಡೆ ಉಳುಮೆ ಮಾಡಿದ್ದ ಗದ್ದೆಗಳಿಗೆ ಮಣ್ಣು ನುಗ್ಗಿದ್ದು, ಮತ್ತೊಮ್ಮೆ ಉಳುಮೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಮೀಪದ ಯಡೂರು ಗ್ರಾಮದಲ್ಲಿ ಹೆಚ್ಚು ಬರೆ ಕುಸಿತವಾಗಿದ್ದು, ತೊರೆ ಪಾತ್ರದ ಗದ್ದೆಗಳಿಗೆ ಹಾನಿಯಾಗಿದೆ. ಅಂತೆಯೇ ಅಭಿಮಠ ಬಾಚಳ್ಳಿಯ ಜಲಪಾತದಲ್ಲಿ ಹೆಚ್ಚಿನ ನೀರು ಬಂದು ಗದ್ದೆಗಳಿಗೆ ನುಗ್ಗಿ ನಷ್ಟವಾಗಿದೆ. ಈಗಾಗಲೇ ನಾಟಿ ಮಾಡಿದ್ದ ಪೈರು ಕೊಚ್ಚಿ ಹೋಗಿದೆ. ಮರು ನಾಟಿ ಮಾಡುವ ಅನಿವಾರ್ಯತೆ ಎದುರಾಗಿದೆ.
ಕಾಫಿ, ಕರಿಮೆಣಸು ಫಸಲು ನಷ್ಟವನ್ನು ಅಂದಾಜಿಸಿ ಬೆಳೆಗಾರರಿಗೆ ಪರಿಹಾರ ಒದಗಿಸಲು ಕಾಫಿ ಮಂಡಳಿ ಮುಂದಾಗಬೇಕೆAದು ತೋಳೂರುಶೆಟ್ಟಳ್ಳಿಯ ಕೃಷಿಕ ಕೆ.ಕೆ. ಸುಧಾಕರ್ ಒತ್ತಾಯಿಸಿದ್ದಾರೆ. ತೋಟದಲ್ಲಿದ್ದ ಕಾಫಿ, ಕರಿಮೆಣಸು ಭಾರೀ ಪ್ರಮಾಣದಲ್ಲಿ ಉದುರಿದೆ. ಈಗಲೇ ಮಂಡಳಿಯಿAದ ಸರ್ವೆ ನಡೆಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಯಡೂರು ಗ್ರಾಮದ ಧನು ಎಂಬವರಿಗೆ ಸೇರಿದ ಸುಮಾರು ಮುಕ್ಕಾಲು ಎಕರೆ ತೋಟ ಕುಸಿದಿದೆ. ರಸ್ತೆ ಬದಿಯಿಂದ ಸುಮಾರು ಮೂರು ಅಡಿಗಳಷ್ಟು ಕೆಳಗೆ ತೋಟ ಕುಸಿದಿದ್ದು, ಬಿರುಕು ಕಾಣಿಸಿಕೊಂಡಿದೆ. ಹೆಚ್ಚಿನ ಮಳೆಯಾದರೆ ಇಡೀ ತೋಟ ಗದ್ದೆಗೆ ಜಾರಲಿದೆ. ತೋಟದ ಸಮೀಪವೇ ಮನೆಗಳೂ ಇದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ಮಸಗೋಡು-ತಣ್ಣೀರುಹಳ್ಳದ ನಡುವಿನ ತಿರುವಿನಲ್ಲಿ ಸಿಲ್ವರ್ ಮರವೊಂದು ರಸ್ತೆಗೆ ಬಾಗಿ ಅಪಾಯಕಾರಿಯಾಗಿ ಪರಿಣಮಿಸಿದ್ದರೂ ತೆರವುಗೊಳಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸುದರ್ಶನ್ ಎಂಬವರಿಗೆ ಸೇರಿದ ತೋಟದಲ್ಲಿರುವ ಸಿಲ್ವರ್ ಮರ ಭಾರೀ ಗಾಳಿಗೆ ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಗೆ ಬಾಗಿದೆ. ಗಾಳಿ ಹೆಚ್ಚಾದರೆ ಯಾವ ಕ್ಷಣದಲ್ಲಾದರೂ ಕೆಳಗೆ ಬೀಳುವ ಸಂಭವವಿದೆ.
ಕಳೆದ ವಾರವಷ್ಟೇ ಕರ್ತವ್ಯ ಮುಗಿಸಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೋರ್ವರ ಬೈಕ್ ಮೇಲೆ ಇದೇ ಮಾರ್ಗದಲ್ಲಿ ಮರಬಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತದಿಂದ ಪಾರಾಗಿದ್ದರು. ಇದೀಗ ತೋಟದಿಂದ ಬಾಗಿರುವ ಮರವನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.