ಕಣಿವೆ, ಜು. ೨೯: ಬಾಲ್ಯ ವಿವಾಹ ಮಾಡಿಕೊಂಡ ಅನುಮಾನದಡಿ ಕುಶಾಲನಗರ ಗ್ರಾಮಾಂತರ ಠಾಣೆಗೆ ಅಂಗನವಾಡಿ ಕಾರ್ಯಕರ್ತೆ ದೂರು ನೀಡಿದ್ದಾರೆ.
ಕುಶಾಲನಗರದಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ ಎರಡು ಕುಟುಂಬದ ಇಬ್ಬರು ಕಿಶೋರಿಯರನ್ನು ವಿವಾಹ ಮಾಡಿ ತಮಿಳುನಾಡಿಗೆ ಕಳುಹಿಸಲಾಗಿದೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಘಟನೆಯ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಮಾಹಿತಿ ಪಡೆದು ಭಾಗ್ಯಲಕ್ಷಿö್ಮ ಬಾಂಡ್ ವಿತರಿಸಲು ತೆರಳಿದ ಸಂದರ್ಭ ಬಾಲ್ಯ ವಿವಾಹ ಆಗಿರುವ ಬಗ್ಗೆ ಅನುಮಾನ ಬಂದಿದೆ.
ಮೂಲತಃ ತಮಿಳುನಾಡು ಮೂಲದ ಕುಟುಂಬಗಳ ಎರಡೂ ಹೆಣ್ಣು ಮಕ್ಕಳನ್ನು ತಮಿಳುನಾಡಿಗೆ ವಿವಾಹ ಮಾಡಲಾಗಿದ್ದು, ಈ ಪೈಕಿ ಒಬ್ಬಳಿಗೆ ಈಗಾಗಲೇ ಎರಡು ಅವಳಿ ಮಕ್ಕಳಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಮಾಹಿತಿ ನೀಡಿದ್ದಾರೆ.
ಉಳಿದಂತೆ ಮತ್ತೋರ್ವ ಯುವತಿಯ ಬಗ್ಗೆ ಕುಟುಂಬಸ್ಥರು ನಿಖರವಾದ ಮಾಹಿತಿ ನೀಡದೇ ಸಬೂಬು ಹೇಳುತ್ತಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ತಾಲೂಕು ಶಿಶು ಹಾಗೂ ಮಹಿಳೆಯರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಅವರು, ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಲು ತಿಳಿಸಿದ ಮೇರೆಗೆ ಲಿಖಿತವಾಗಿ ದೂರು ನೀಡಲಾಗಿದೆ ಎಂದು ಕಾರ್ಯಕರ್ತೆ ತಿಳಿಸಿದ್ದಾರೆ.
ಪೊಲೀಸರು ವಿಳಂಬ
ಬಾಲ್ಯವಿವಾಹದ ಬಗ್ಗೆ ನಿಖರವಾದ ಮಾಹಿತಿ ನೀಡಿ ಈ ಬಗ್ಗೆ ಹೆಚ್ಚಿನ ತನಿಖೆಗೆ ಒತ್ತಾಯಿಸಿ ದೂರು ನೀಡಲಾಗಿದ್ದರೂ, ಕೂಡ ಕುಶಾಲನಗರ ಗ್ರಾಮಾಂತರ ಠಾಣೆಯವರು ಈ ಬಗ್ಗೆ ೧೦೯೮ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿ ಎನ್ನುತ್ತಿದ್ದಾರೆ. ೧೦೯೮ಕ್ಕೆ ಕರೆ ಮಾಡಿದರೆ ಅವರು ಪೂರಕವಾದ ದಾಖಲೆಗಳನ್ನು ಒದಗಿಸಿ ಎನ್ನುತ್ತಿದ್ದಾರೆ. ತಾನು ಭಾನುವಾರವೇ ಲಿಖಿತವಾಗಿ ದೂರು ನೀಡಿದ್ದರೂ ಕೂಡ ಈ ಬಗ್ಗೆ ಸ್ಥಳೀಯ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಅಂಗನವಾಡಿ ಕಾರ್ಯಕರ್ತೆ ತಿಳಿಸಿದ್ದಾರೆ.
ವರದಿ : ಕೆ.ಎಸ್.ಮೂರ್ತಿ