ನಾಪೋಕ್ಲು, ಜು. ೨೯: ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಗ್ರಾಮಾಂತರ ಮಂಡಲದ ಕಾರ್ಯಕಾರಿಣಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮನು ಮುತ್ತಪ್ಪ, ಪ್ರಮುಖರಾದ ರಾಬಿನ್ ದೇವಯ್ಯ, ಕಾಂಗೀರ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಂಡಲ ಪ್ರಧಾನ ಕಾರ್ಯದರ್ಶಿ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮತ್ತು ಡೀನ್ ಬೋಪಣ್ಣ, ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್ ಉಪಸ್ಥಿತರಿದ್ದು, ಕೆಲವು ಪ್ರಮುಖ ನಿರ್ಣಯವನ್ನು ಕೈಗೊಳ್ಳಲಾಯಿತು.
* ಕೊಡಗು ಜಿಲ್ಲೆಯಲ್ಲಿ ವಿಪರೀತ ಗಾಳಿ ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ದುರಸ್ತಿ ಕಾರ್ಯಗಳನ್ನು ವಿದ್ಯುತ್ ಇಲಾಖೆ ಸರಿಯಾಗಿ ಮಾಡದೇ ಇರುವುದರಿಂದ ರೈತರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಸಮರ್ಪಕವಾಗಿ ವಿದ್ಯುತ್ ಒದಗಿಸಲು ಒತ್ತಾಯಿಸ ಲಾಯಿತು.
* ಗ್ರಾಮೀಣ ರಸ್ತೆಗಳು ತೀವ್ರ ಹದಗೆಟ್ಟಿದ್ದು, ದುರಸ್ತಿ ಕಾಣದೆ ಸಾರ್ವಜನಿಕರಿಗೆ ಓಡಾಟಕ್ಕೆ ತುಂಬಾ ಕಷ್ಟಕರವಾಗಿರುವುದರಿಂದ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.
ಕೇಂದ್ರದ ಜಲಜೀವನ್ ಮಿಷನ್ ಯೋಜನೆ ಅಡಿ ಅನುದಾನ ಬಂದಿದ್ದರೂ, ಗುತ್ತಿಗೆದಾರರ ನಿರ್ಲಕ್ಷö್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಒದಗಿಸಲು ಸರ್ಕಾರ ವಿಫಲವಾಗಿದೆ. ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸುವಂತೆ ಒತ್ತಾಯಿಸಲಾಯಿತು.
* ಜಿಲ್ಲೆಯಲ್ಲಿ ಆನೆ ಹಾವಳಿಯಿಂದ ರೈತರ ಬೆಳೆ ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲಾಖೆ ತಕ್ಷಣ ಆನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯಿಸಲಾಯಿತು.
* ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಇಲಾಖೆ ಭೇಟಿ ನೀಡಿ ಸಮರ್ಪಕವಾದ ವರದಿಯನ್ನು ಸರ್ಕಾರಕ್ಕೆ ನೀಡದಿರುವುದರಿಂದ ಸಮಸ್ಯೆ ಉಂಟಾಗಿದೆ. ಕೆಡಿಪಿ ಸಭೆಯಲ್ಲಿ ಸ್ಪಂದನೆ ಸಿಗದೇ ಇರುವುದನ್ನು ಖಂಡಿಸ ಲಾಯಿತು. ಸಭೆಯಲ್ಲಿ ಮಡಿಕೇರಿ ಗ್ರಾಮಾಂತರ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಹಕಾರಿ ಸಂಘಗಳ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.