ಶನಿವಾರಸಂತೆ, ಜು. ೨೯: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ನೌಕರ ಮುತ್ತಪ್ಪ ಹಾಗೂ ಕುಟುಂಬ ವಾಸಿಸುತ್ತಿದ್ದ ವಸತಿಗೃಹದ ಮೇಲೆ ಮರ ಬಿದ್ದಿದೆ. ಪರಿಣಾಮ ಹೆಂಚುಗಳು ಒಡೆದು ಚೂರುಚೂರಾಗಿ ಮನೆಯ ಕೊಠಡಿಯಲ್ಲಿ ಮಲಗಿದ್ದ ಮುತ್ತಪ್ಪ ಅವರ ಹಿರಿಯ ಪುತ್ರಿ ವನಿತಾ ಹಾಗೂ ಆಕೆಯ ೨ ವರ್ಷ ೬ ತಿಂಗಳ ಮಗಳ ಮೇಲೆ ಬಿದ್ದಿದೆ.
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ವನಿತಾ ಹಾಗೂ ಆಕೆಯ ಮಗಳ ತಲೆ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ಮರ ಬಿದ್ದ ಶಬ್ದ ಕೇಳಿ ಆಕೆಯ ಮಗಳ ರಕ್ಷಣೆಗೆ ಧಾವಿಸಿದ ಮುತ್ತಪ್ಪ ಮತ್ತು ಕಿರಿಯ ಮಗಳಿಗೂ ಹಂಚುಗಳು ಬಿದ್ದು ಪೆಟ್ಟಾಗಿದೆ.
ಘಟನೆ ನಡೆದು ೩ ದಿನಗಳು ಕಳೆದರೂ ಕಂದಾಯ ಇಲಾಖೆಯವರಾಗಲೀ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯವರಾಗಲಿ ಯಾರೂ ಮನೆಯ ಬಳಿ ಸುಳಿಯಲಿಲ್ಲ ಸ್ಪಂದಿಸಲೂ ಇಲ್ಲ ಎಂದು ಕುಟುಂಬ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಸ್ತುತ ಮುತ್ತಪ್ಪನವರ ಕುಟುಂಬ ಆ ಮನೆ ಖಾಲಿ ಮಾಡಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪಾಳು ಬಿದ್ದಿರುವ ವೈದ್ಯರ ವಸತಿಗೃಹವನ್ನು ಸ್ವಚ್ಛಗೊಳಿಸಿ ವಾಸಿಸುತ್ತಿದ್ದಾರೆ. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ವಸತಿ ಗೃಹದ ಮೇಲೆ ಬೀಳುವಂತಿದ್ದ ಮರವನ್ನು ತೆರವುಗೊಳಿಸುವಂತೆ ಪಕ್ಕದ ತೋಟ ಮಾಲೀಕರಿಗೆ ತಿಳಿಸಿದ್ದು, ಅವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇಲಾಖೆ ಅನುಮತಿ ನೀಡದಿದ್ದು, ಎಲ್ಲರ ನಿರ್ಲಕ್ಷ್ಯದಿಂದ ಮರ ಮನೆಯ ಮೇಲೆ ಬಿದ್ದು ಕುಟುಂಬ ನೋವು ಅನುಭವಿಸಿ ನೆಲೆಯಿಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಮುತ್ತಪ್ಪ ಅಳಲು ತೋಡಿಕೊಂಡರು.