ಗೋಣಿಕೊಪ್ಪಲು, ಜು. ೨೯: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ತುಂಡಾಗಿ ಬಿದ್ದಿದ್ದ ೧೧ ಕೆ.ವಿ. ವಿದ್ಯುತ್ ತಂತಿ ತುಳಿದು ಹಸು- ಕರು ಸೇರಿದಂತೆ ೬ ಜಾನುವಾರುಗಳು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ದ.ಕೊಡಗಿನ ತೆರಾಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಬೊಜ್ಜಂಗಡ ನಟರಾಜ್ (ನಂದಾ) ಎಂಬವರಿಗೆ ಸೇರಿದ ಹಸು - ಕರುಗಳು ಮನೆಯ ಸಮೀಪದ ನಡೆದಾಡುವ ದಾರಿಯಲ್ಲಿ ಸಂಜೆಯ ವೇಳೆ ಮೇಯುತ್ತಾ ಮನೆಯ ಬಳಿಯ ಕೊಟ್ಟಿಗೆ ಬಳಿಗೆ ಮರಳುತ್ತಿದ್ದ ಸಂದರ್ಭ ೧೧ ಕೆ.ವಿ. ವಿದ್ಯುತ್ ಲೈನ್ ತಗುಲಿ ಕೊನೆಯುಸಿರೆಳೆದಿವೆ. ಲೈನ್ ಟ್ರಿಪ್ ಆಗದ ಪರಿಣಾಮ ಬಿದ್ದಿದ್ದ ತಂತಿಯಲ್ಲಿ ವಿದ್ಯುತ್ ಸಂಚರಿಸುತಿತ್ತು.

ಇದೇ ರಸ್ತೆಯಲ್ಲಿ ಬಂದಿರುವ ಆರು ಹಸುಗಳು ತಂತಿಯನ್ನು ತುಳಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿವೆ.

ಸುದ್ದಿ ತಿಳಿದ ಹಸುಗಳ ಮಾಲೀಕ ಶ್ರೀಮಂಗಲ ಚೆಸ್ಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ನಂತರ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಯಿತು.

ಚೆಸ್ಕಾಂ ಎಇಇ ಸುರೇಶ್, ಶ್ರೀಮಂಗಲ ಜೆ.ಇ.ನಾಗೇಂದ್ರ ಪ್ರಸಾದ್, ಗೋಣಿಕೊಪ್ಪ ಜೆಇ ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಹಸುಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಶ್ರೀಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ಹೆಚ್.ಕೆ. ಜಗದೀಶ್