ಕುಶಾಲನಗರ, ಜು. ೨೯: ಕುಶಾಲನಗರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ರೂ.೫ ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಕಲ್ಪಿಸಲು ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸ್ಥಳೀಯ ಮಾರುಕಟ್ಟೆ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಂಘದ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಲು ಪ್ರತಿ ವರ್ಷ ವಿದ್ಯಾರ್ಥಿ ವೇತನ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

೨೦೨೪-೨೫ ನೇ ಸಾಲಿನಲ್ಲಿ ಸಂಸ್ಥೆಯಿAದ ವನಸಿರಿ ಯೋಜನೆಯಡಿ ವಿವಿಧ ಸ್ಥಳಗಳಲ್ಲಿ ೫೦೦ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಯೋಜನೆ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಸಂಘವು ೨೦೨೩ -೨೪ ರಲ್ಲಿ ರೂ. ೪೧೨.೭೧ ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, ರೂ.೩.೦೪ ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.೨೫ ಡಿವಿಡೆಂಡ್ ನೀಡಿದ್ದೇವೆ.

೨೦೨೨-೨೩ನೇ ಸಾಲಿನಲ್ಲಿ ೧೩೦೫ ಸದಸ್ಯರಿಂದ ರೂ.೩.೪೫ ಕೋಟಿ ಪಾಲು ಬಂಡವಾಳ ಸಂಗ್ರಹಿಸಿದ್ದು,ಮಾರ್ಚ್ ಅಂತ್ಯಕ್ಕೆ ರೂ. ೫೯.೩೬ ಕೋಟಿ ಠೇವಣಿ ಸ್ವೀಕರಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ರೂ. ೩.೩೧ ಕೋಟಿ ಹೆಚ್ಚಾಗಿದೆ. ಸಂಘದ ದುಡಿಯುವ ಬಂಡವಾಳವು ರೂ. ೭೦.೩೫ ಕೋಟಿಯಿಂದ ರೂ ೭೯.೩೮ ಕೋಟಿಗೆ ಹೆಚ್ಚಿದೆ ಎಂದರು.

ಕಳೆದ ೨ ವರ್ಷಗಳಿಂದ ಸಾವಿರಾರು ಗಿಡಗಳನ್ನು ನೆಟ್ಟು ಬೆಳಸಲಾಗಿದೆ. ಕೂಡ್ಲುರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರೂ.೪೦ ಸಾವಿರ ವೆಚ್ಚದಲ್ಲಿ ಪುಸ್ತಕ ಮತ್ತು ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದೇವೆ ಎಂದರು.

ಸAಸ್ಥೆಯಲ್ಲಿ ಒಬ್ಬ ಸದಸ್ಯನಿಗೆ ಗರಿಷ್ಠ ೨.೧೦ ಕೋಟಿ ಸಾಲ ನೀಡಲು ಅವಕಾಶವಿದೆ. ಸಂಸ್ಥೆಯಲ್ಲಿ ವಾಹನ, ಕೈಗಾರಿಕೆ, ಮನೆ ನಿರ್ಮಾಣಕ್ಕೆ, ನಿವೇಶನ ಖರೀದಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಸಾಲವನ್ನು ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಸುಭದ್ರವಾದ ಚಿಟ್ ಫಂಡ್ ಕೂಡ ನಡೆಸಲಾಗುತ್ತಿದೆ. ಈ ಸೌಲಭ್ಯಗಳನ್ನು ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶರವಣಕುಮಾರ್ ಮನವಿ ಮಾಡಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೊನ್ಸ್, ನಿರ್ದೇಶಕರಾದ ಎಂ.ಎA.ಶಾಹಿರ್, ಎನ್.ಇ.ಶಿವಪ್ರಕಾಶ್, ಎಂ.ವಿ.ನಾರಾಯಣ, ವಿ.ಸಿ.ಅಮೃತ್, ಎಲ್.ನವೀನ್, ಕೆ.ಪಿ.ಶರತ್, ಕವಿತಾ, ಕೃತಿಕಾ ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಬಿ.ರಾಮಕೃಷ್ಣ, ಕೆ.ಎನ್.ಸುರೇಶ್, ಆರ್.ಕೆ.ನಾಗೇಂದ್ರ ಬಾಬು, ಸಿಇಒ ಬಿ.ಡಿ.ಶ್ರೀಜೇಶ್ ಮತ್ತು ವ್ಯವಸ್ಥಾಪಕ ಆರ್.ರಾಜು ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.