ಕುಶಾಲನಗರ, ಜು. ೨೯: ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶೋಧ ಕಾರ್ಯಾಚರಣೆಯಲ್ಲಿ ಆರು ದಿನಗಳ ಕಾಲ ನಿರಂತರ ತೊಡಗಿಸಿಕೊಂಡಿದ್ದ ತಂಡಗಳು ನಾಪತ್ತೆಯಾಗಿದ್ದ ಅರುಣ್ ಮೃತ ದೇಹ ಪತ್ತೆ ಮಾಡುವಲ್ಲಿ ಸೋಮವಾರ ಮಧ್ಯಾಹ್ನ ಯಶಸ್ವಿಯಾಗಿವೆ.

ಕುಶಾಲನಗರ ಸೇತುವೆಯಿಂದ ಸುಮಾರು ಎಂಟು ಕಿಲೋಮೀಟರ್ ದೂರದ ಕೂಡುಮಂಗಳೂರು ಬಳಿ ನದಿಯ ತಟದಲ್ಲಿ ಶವ ಪತ್ತೆಯಾಗಿದೆ.

ಮಡಿಕೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಅರುಣ್ (೫೦) ತಾ.೨೪ರಂದು ಮಧ್ಯಾಹ್ನ ಕುಶಾಲನಗರ ಕೊಪ್ಪ ಕಾವೇರಿ ನದಿಯ ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡ, ಪೊಲೀಸ್ ಇಲಾಖೆ ಮತ್ತು ದುಬಾರೆ ರ‍್ಯಾಫ್ಟರ್ ತಂಡದ ಸುಮಾರು ಮೂವತ್ತಕ್ಕೂ ಅಧಿಕ ಮಂದಿ ಕಾವೇರಿ ನದಿ ಉದ್ದಕ್ಕೂ ಶೋಧ ಕಾರ್ಯದಲ್ಲಿ ತೊಡಗಿದ್ದರು.

ಈ ನಡುವೆ ಬಿರುಸಿನ ಮಳೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಅಪಾಯದ ಹಂತ ಮೀರಿ ಹರಿಯಲು ಆರಂಭಿಸಿದರೂ ಕಾರ್ಯಾಚರಣೆ ತಂಡ ಮಾತ್ರ ಹುಡುಕಾಟ ಮುಂದುವರೆಸಿತ್ತು.

ಈ ನಡುವೆ ಕಾರ್ಯಾಚರಣೆ ತಂಡದಲ್ಲಿ ತೊಡಗಿದ್ದ ದುಬಾರೆ ರ‍್ಯಾಪ್ಟರ್ ತಂಡಕ್ಕೆ ಅಪರಿಚಿತ ಕೊಳೆತ ಶವ ಒಂದು ಪತ್ತೆಯಾಗಿ ನಂತರ ಅದರ ವಾರಿಸುದಾರರ ಪತ್ತೆ ಕೂಡ ನಡೆದಿತ್ತು. ಬಸವನಹಳ್ಳಿಯ ಮಹೇಶ ಎಂಬವರು

(ಮೊದಲ ಪುಟದಿಂದ) ನಾಪತ್ತೆಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಅಂತ್ಯಗೊAಡಿತು.

ಛಲ ಬಿಡದ ಕಾರ್ಯಾಚರಣೆ ತಂಡ ಬೆಳಿಗ್ಗೆ ೮ ಗಂಟೆಯಿAದ ಸಂಜೆ ೬ ಗಂಟೆ ತನಕ ದಿನವೊಂದಕ್ಕೆ ತಲಾ ಹತ್ತು ಗಂಟೆಗಳ ಅವಧಿ ಶೋಧಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ತಂಡದ ಸದಸ್ಯರು ಕೊನೆಗೂ ಅರುಣ್ ಮೃತ ದೇಹವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಐದು ದಿನಗಳ ಕಾಲ ನದಿಯಲ್ಲಿದ್ದ ದೇಹ ಊದಿಕೊಂಡಿದ್ದು, ಅರುಣ್ ಕುಟುಂಬ ಸದಸ್ಯರು ಮೃತ ದೇಹದ ಗುರುತು ಪತ್ತೆ ಹಚ್ಚಿ ಅರುಣ್ ಎಂಬುದಾಗಿ ದೃಢಪಡಿಸಿದ್ದಾರೆ. ದೇಹದಲ್ಲಿದ್ದ ಕೆಲವು ಕುರುಹುಗಳು ಕೂಡ ಪತ್ತೆ ಕಾರ್ಯಕ್ಕೆ ಸಹಕಾರಿಯಾದವು. ಮೃತ ದೇಹದ ಮರಣೋತ್ತರ ಪರೀಕ್ಷೆ ಕುಶಾಲನಗರ ಸರಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ನಡೆದು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಮೃತ ಅರುಣ್ ಮೂಲತಃ ಮಂಡ್ಯ ಜಿಲ್ಲೆಯ ಕೊತ್ನಹಳ್ಳಿ ಗ್ರಾಮದವ ರಾಗಿದ್ದು ಅಲ್ಲಿಗೆ ಕುಟುಂಬಸ್ಥರು ಸಾಗಿಸಿರುವುದಾಗಿ ಕುಶಾಲನಗರ ಡಿ.ವೈ.ಎಸ್.ಪಿ. ಆರ್.ವಿ. ಗಂಗಾಧರಪ್ಪ ತಿಳಿಸಿದ್ದಾರೆ. ಮೃತರ ಪತ್ನಿ ಮಧು ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಆರು ದಿನಗಳ ಕಾಲ ನಿರಂತರ ಕಾರ್ಯಾಚರಣೆ

ಕುಶಾಲನಗರ ಡಿ.ವೈ.ಎಸ್.ಪಿ. ಆರ್.ವಿ. ಗಂಗಾಧರಪ್ಪ, ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಉಸ್ತುವಾರಿಯಲ್ಲಿ ೫ ತಂಡಗಳು ತಮ್ಮ ಜೀವವನ್ನು ಪಣಕಿಟ್ಟು ಅಪಾಯದ ಹಂತ ಮೀರಿ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಶೋಧ ಪ್ರಯತ್ನ ನಡೆಸಿದರು. ಎರಡು ದಿನಗಳ ಕಾಲ ಶೋಧ ಕಾರ್ಯ ವೇಳೆ ಕುಶಾಲನಗರ ಕೊಪ್ಪ ಸೇತುವೆ ಕೆಳಭಾಗದಲ್ಲಿ ನದಿಯಲ್ಲಿ ಸುಮಾರು ೨೫ ಅಡಿ ಎತ್ತರಕ್ಕೆ ನೀರು ಹರಿದರೆ ಸೇತುವೆಯ ಕೆಳಭಾಗದ ಅನತಿ ದೂರದಲ್ಲಿ ೩೦ ಅಡಿಗಳಿಗೂ ಮೀರಿ ಎತ್ತರಕ್ಕೆ ನೀರು ರಭಸದಿಂದ ಹರಿಯುತ್ತಿತ್ತು. ಸವಾಲಿನ ನಡುವೆ ತಂಡ ಕೆಲಸ ನಡೆಸಿತ್ತು.

ಸಂಚಾರಿ ಠಾಣೆಯ ಠಾಣಾಧಿಕಾರಿ ಕಾಶೀನಾಥ್ ಬಗಲಿ, ಕುಶಾಲನಗರ ಪಟ್ಟಣದ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿಗಳ ಶೋಧ ಕಾರ್ಯಾಚರಣೆ ನಡುವೆ ಮಂಗಳೂರು ಮಲ್ಪೆಯ ನುರಿತ ಈಜುತಜ್ಞ ಈಶ್ವರ್ ಕೂಡ ಆಗಮಿಸಿ ಒಂದು ದಿನ ಹುಡುಕಾಟ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಅನನ್ಯ ವಾಸುದೇವ್ ನೇತೃತ್ವದ ಎನ್.ಡಿ.ಆರ್.ಎಫ್. ತಂಡದ ಸದಸ್ಯರು, ಅಗ್ನಿ ಶಾಮಕ ಅಧಿಕಾರಿ ಚಿಕ್ಕೇಗೌಡ ನೇತೃತ್ವದ ಅಗ್ನಿಶಾಮಕ ತಂಡ ಪೊಲೀಸ್ ಇಲಾಖೆ ಜೊತೆಗೆ ಕೈಜೋಡಿಸಿದ ದುಬಾರೆಯ ರ‍್ಯಾಫ್ಟಿಂಗ್ ತಂಡದ ಪ್ರಮುಖ ರಾಜೇಶ್ ಅವರ ನೇತೃತ್ವದಲ್ಲಿ ತಂಡದ ಸದಸ್ಯರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶೋಧ ಕಾರ್ಯದಲ್ಲಿ ಸ್ಥಳೀಯ ಆಟೋ ಚಾಲಕ ಹಾಗೂ ನೂರಾರು ಸಂಖ್ಯೆಯ ಅಪರಿಚಿತ ಶವಗಳಿಗೆ ಮುಕ್ತಿ ಕಾಣಿಸಿದ ಮುನೀರ್ ಅವರು ಕೂಡ ಕಳೆದ ಐದು ದಿನಗಳಿಂದ ತಮ್ಮನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂತು. ಕೊನೆಯ ಹಂತದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರು ಕೂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು. - ಚಂದ್ರಮೋಹನ್