ಕೂಡಿಗೆ, ಜು. ೨೯: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ವ್ಯಾಪ್ತಿಯ ರೈತರ ಜಮೀನುಗಳಿಗೆ ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿವೆ.
ಬಾಣವಾರ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ಕಳೆದ ಒಂದು ವಾರದಿಂದ ರಾಬಿನ್ ರಾಜೇಂದ್ರ, ರಾಮಣ್ಣ,ಮುತ್ತುಸ್ವಾಮಿ ಪೂವಯ್ಯ ಸೇರಿದಂತೆ ಹಲವು ರೈತರ ಜಮೀನಿಗೆ ದಾಳಿ ಮಾಡಿ ತೆಂಗು, ಸಿಹಿ ಗೆಣಸು, ಬಾಳೆ, ಕೆಸ, ಶುಂಠಿ ಬೆಳೆಗಳನ್ನು ತುಳಿದು, ತಿಂದು ಬಾರಿ ನಷ್ಟಪಡಿಸಿವೆ. ಕಾಡಾನೆಗಳನ್ನು ಸ್ಥಳೀಯರ ತೋಟದಲ್ಲಿ ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಕಾಡಿಗೆ ಓಡಿಸುವಂತೆ ಗ್ರಾಮಸ್ಥರ ಅಗ್ರಹವಾಗಿದೆ. ಸ್ಧಳಕ್ಕೆ ಬಾಣವಾರ ಉಪ ವಲಯ ಅರಣ್ಯ ಅರಣ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.