ವೀರಾಜಪೇಟೆ, ಜು. ೨೯: ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕಾಂಕ್ರೀಟ್ ರಸ್ತೆ ಕುಸಿದಿದ್ದು, ಘಟನಾ ಸ್ಥಳಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೀರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಂದ್ ರೋಡ್‌ನಿಂದ ತರ್ಮೆಮೊಟ್ಟೆಗೆ ತೆರಳುವ ಸುಮಾರು ೫೦೦ ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ಒಂದು ಬದಿ ಕುಸಿದು ಬಿದ್ದು ರಸ್ತೆ ಸಂಚಾರವು ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ಎ.ಎಸ್. ಪೊನ್ನಣ್ಣ ಅವರು ಅಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ೨೦೨೦-೨೧ನೇ ಸಾಲಿನಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯು ಭಾರಿ ಮಳೆಯಿಂದಾಗಿ ಕುಸಿದು ಬಿದ್ದಿದೆ. ಲೋಕೋಪಯೋಗಿ ಇಲಾಖೆಯ ಆಭಿಯಂತರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಧಿಕ ಮಳೆಯ ಹಿನ್ನೆಲೆಯಲ್ಲಿ ರಸ್ತೆಯ ಮತ್ತೊಂದು ಭಾಗವು ಕುಸಿಯುವ ಹಂತದಲ್ಲಿದೆ. ರಸ್ತೆಯ ಸನಿಹದಲ್ಲಿರುವ ಕಾಫಿ ತೋಟದ ಮಾಲೀಕರೊಂದಿಗೆ ಮಾತನಾಡಿದ ನಂತರ ತೋಟದ ಅಂಚನ್ನು ಬಳಸಿಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ತರ್ಮೆಮೊಟ್ಟೆ ಗ್ರಾಮದ ಗ್ರಾಮಸ್ಥರು ಕುಸಿದ ರಸ್ತೆಯನ್ನು ದುರಸ್ತಿ ಮಾಡುವಂತೆ ಮತ್ತು ಬದಲಿ ರಸ್ತೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಿದ್ದರು. ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಹಣಾ ನಿಧಿಯಿಂದ ಸುಮಾರು ೫ ಲಕ್ಷ ಬಿಡುಗಡೆಗೊಳಿಸಿದ್ದು, ನೆಲ್ಲಿಗೆಮೊಟ್ಟೆಯಿಂದ ತರ್ಮೆಮೊಟ್ಟೆ ಗ್ರಾಮಕ್ಕೆ ತೆರಳುವ ೨೦ ಅಡಿ ಅಗಲವಿರುವ ಬದಲಿ ರಸ್ತೆ ಕಾಮಗಾರಿಗಳು ಅರಂಭಗೊAಡಿದೆ.
ಕುಸಿದ ರಸ್ತೆ ಪರಿಶೀಲನೆ ವೇಳೆಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ, ಕಂದಾಯ ಇಲಾಖೆಯ ಪರಿವೀಕ್ಷಕ ಎಂ.ಎಲ್. ಹರೀಶ್, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಲಿಂಗರಾಜು, ಚೆಸ್ಕಾಂ ಅಧಿಕಾರಿ ಸುರೇಶ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ಗ್ರಾಮ ಲೆಕ್ಕಿಗರಾದ ಅನೀಶಾ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳೇಟಿರ ಜೆಫ್ರಿ ಉತ್ತಪ್ಪ, ಸದಸ್ಯ ಎಂ.ಎA. ಇಸ್ಮಾಯಿಲ್, ವಲಯ ಕಾಂಗ್ರೆಸ್ ಸದಸ್ಯರಾದ ಕರಿನೆರವಂಡ ಜೀತನ್ ಉತ್ತಪ್ಪ, ಡ್ಯಾನಿ ಕುಶಾಲಪ್ಪ ಮತ್ತು ಮುತ್ತಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.