ಕುಶಾಲನಗರ, ಜು. ೨೯: ಪಟ್ಟಣದಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲವಾಗಿರುವ ಕುಶಾಲನಗರ ಚೆಸ್ಕಾಂ ವಿರುದ್ಧ ಕುಶಾಲನಗರದಲ್ಲಿ ಗೆಳೆಯರ ಬಳಗ ವತಿಯಿಂದ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಕುಶಾಲನಗರದ ಬಿ ಎಂ ರಸ್ತೆಯಲ್ಲಿ ಹಾಗೂ ಸುತ್ತಮುತ್ತಲು ವಿದ್ಯುತ್ ಕಣ್ಣು ಮುಚ್ಚಾಲೆ ಅಧಿಕವಾಗಿದ್ದು ಸಿಬ್ಬಂದಿಗೆ ದೂರು ನೀಡಿದರು ಸ್ಪಂದಿಸುತ್ತಿಲ್ಲ ಎಂದು ದೂರಿದ ಪ್ರತಿಭಟನಾಕಾರರು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅಧಿಕಾರಿಗಳಿಗೆ ಮಾಹಿತಿ ನೀಡಿದ ಪ್ರತಿಭಟನಾಕಾರರು ಸಂಬAಧಿಸಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪಟ್ಟಣದಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ಭಾರಿ ನಷ್ಟ ಉಂಟಾಗಿದೆ. ತಕ್ಷಣ ಕ್ರಮ ಕೈಗೊಳ್ಳದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪುರಸಭೆ ಸದಸ್ಯ ವಿ.ಎಸ್ ಆನಂದ್ ಕುಮಾರ್ ಎಚ್ಚರಿಸಿದರು.
ಈ ಸಂದರ್ಭ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಸಿಬ್ಬಂದಿಗಳ ನಿರ್ಲಕ್ಷದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ಆಯುಬ್,ರಾಕಿ, ಚಂದನ್, ಸಂತೋಷ್ ಹೆಚ್ ಜೆ. ಗೋಪಾಲ್, ರಾಕೇಶ್ ನಿಜಾಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.