ಗೋಣಿಕೊಪ್ಪಲು, ಜು. ೨೯: ದ.ಕೊಡಗಿನ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಸುತ್ತಮುತ್ತಲಿನ ನದಿ,ತೊರೆಗಳು ಉಕ್ಕಿ ಹರಿಯುತ್ತಿವೆ. ಬಿರುನಾಣಿ-ಪರಕಟÀಗೇರಿ ರಸ್ತೆ ನಡುವೆ ನದಿಯಂತೆ ನೀರು ಒಂದೇ ಸಮನೆ ಹರಿಯುತ್ತಿದೆ. ಬಿರುನಾಣಿ ಭಾಗದ ಬಲ್ಯಮಟ ನದಿಯಲ್ಲಿ ನೀರಿನ ಮಟ್ಟ ತೀವ್ರ ಹೆಚ್ಚಳಗೊಂಡ ಹಿನ್ನಲೆಯಲ್ಲಿ ಈ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬಿರುನಾಣಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಬಿರುನಾಣಿ ಭಾಗಕ್ಕೆ ಕಳೆದ ೨೪ ಗಂಟೆಯಲ್ಲಿ ೭.೪೦ ಇಂಚು ಮಳೆ ಸುರಿದಿದೆ. ಪೊರಾಡು-ಬಾಡಗರಕೇರಿ ವ್ಯಾಪ್ತಿಗೆ ೫ ಇಂಚು, ಶ್ರೀಮಂಗಲ-ಟಿ.ಶೆಟ್ಟಿಗೇರಿ-ಹುದಿಕೇರಿ ವ್ಯಾಪ್ತಿಗೆ ೪ ಇಂಚು ಮಳೆಯಾಗಿದೆ. ಸೋಮವಾರವು ಮಳೆಯ ಆರ್ಭಟ ಈ ಭಾಗದಲ್ಲಿ ಮುಂದುವರೆದಿದ್ದು, ಈ ಭಾಗಕ್ಕೆ ತೆರಳುವ ಖಾಸಗಿ ಬಸ್‌ಗಳು ಅಪಾಯದ ನಡುವೆಯೆ ಸಂಚಾರ ನಡೆಸಿದವು.

ಕಾಫಿ ಹಾಗೂ ಭತ್ತದ ಗದ್ದೆಗಳಿಗೆ ಕಾರ್ಮಿಕರು ತೆರಳಲು ಹಿಂದೇಟು ಹಾಕಿದರು. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದ ಈ ಭಾಗದಲ್ಲಿ ಮರಗಳು ಬೀಳುತ್ತಿವೆ. ಇದರಿಂದ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು,ಈ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.