ಸೋಮವಾರಪೇಟೆ, ಜು. ೨೯: ಕಳೆದ ೨೦ ದಿನಗಳಿಂದ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕುಂದಳ್ಳಿ, ಕುಮಾರಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಕತ್ತಲಲ್ಲಿ ಮುಳುಗಿದ್ದು, ಸಮಸ್ಯೆಗಳಿಗೆ ಸ್ಥಳೀಯ ಸೆಸ್ಕ್ ಅಭಿಯಂತರ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕುಂದಳ್ಳಿ ಹಾಗೂ ಕುಮಾರಳ್ಳಿ ಭಾಗದ ನೂರಾರು ಮಂದಿ ಇಲ್ಲಿನ ಸೆಸ್ಕ್ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದ ವಿದ್ಯುತ್ ಲೈನ್ಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು, ಈಗಿರುವ ಮಾರ್ಗವನ್ನು ಬದಲಿಸಿ ನೂತನ ಮಾರ್ಗ ಅಳವಡಿಸಬೇಕು. ಆಗಸ್ಟ್ ಅಂತ್ಯದೊಳಗೆ ಈ ಕಾಮಗಾರಿ ನಿರ್ವಹಿಸದಿದ್ದರೆ ಸೆಸ್ಕ್ ಕಚೇರಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಳೆದ ೨೦ ದಿನಗಳಿಂದ ಗ್ರಾಮಗಳಿಗೆ ವಿದ್ಯುತ್ ಇಲ್ಲವಾಗಿದೆ. ಸಮಸ್ಯೆ ಬಗ್ಗೆ ಶಾಂತಳ್ಳಿಯಲ್ಲಿರುವ ಸೆಸ್ಕ್ ಇಂಜಿನಿಯರ್ಗೆ ತಿಳಿಸಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈವರೆಗೆ ದುರಸ್ತಿ ಕಾರ್ಯವನ್ನೂ ಕೈಗೊಂಡಿಲ್ಲ. ಗ್ರಾಮಸ್ಥರೇ ಸೇರಿ ಮಳೆಗಾಲಕ್ಕೂ ಮುನ್ನವೇ ವಿದ್ಯುತ್ ಲೈನ್ಗಳ ಮಾರ್ಗವನ್ನು ಸರಿಪಡಿಸಿದ್ದೇವೆ. ಮರಗಳ ಕೊಂಬೆಗಳನ್ನು ತೆರವುಗೊಳಿಸಿದ್ದೇವೆ. ಆದರೂ ನಮ್ಮ
(ಮೊದಲ ಪುಟದಿಂದ) ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ಇಲ್ಲದೇ ಇರುವುದರಿಂದ ಮೊಬೈಲ್ ಚಾರ್ಜ್ ಮಾಡಲೂ ಆಗುತ್ತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಲೂ ಆಗುತ್ತಿಲ್ಲ. ಗ್ರಾಮಸ್ಥರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಗಾಳಿ-ಮಳೆಗೆ ಮರಗಳು ಬಿದ್ದು ವಿದ್ಯುತ್ ಸ್ಥಗಿತಗೊಂಡಿದೆ. ಮುರಿದು ಬಿದ್ದಿರುವ ಕಂಬಗಳನ್ನು ಬದಲಾಯಿಸುವಲ್ಲಿ ಅಭಿಯಂತರರು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಪ್ರಸ್ತುತ ಯಡೂರು, ಕಂಬಳ್ಳಿ, ಅಭಿಮಠ ಬಾಚಳ್ಳಿ, ಶಾಂತಳ್ಳಿ, ನಗರಳ್ಳಿ, ಕುಂದಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಬೀದಳ್ಳಿ, ನಾಡ್ನಳ್ಳಿ, ಮಲ್ಲಳ್ಳಿಗೆ ವಿದ್ಯುತ್ ಸಂಪರ್ಕದ ಲೈನ್ ಅಳವಡಿಸಲಾಗಿದೆ. ಈ ಮಾರ್ಗವು ಅರಣ್ಯ ಪ್ರದೇಶದೊಳಗೆ ಹಾದು ಹೋಗಿರುವುದರಿಂದ ಆಗಾಗ್ಗೆ ಮರಗಳು ಬಿದ್ದು, ಮಳೆಗಾಲದಲ್ಲಿ ತಿಂಗಳುಗಟ್ಟಲೆ ವಿದ್ಯುತ್ ಸ್ಥಗಿತವಾಗುತ್ತಿದೆ. ಈ ಹಿನ್ನೆಲೆ ಮಾರ್ಗವನ್ನು ಬದಲಿಸಬೇಕೆಂದು ಒತ್ತಾಯಿಸಿದರು.
ಶಾಂತಳ್ಳಿಯಿAದ ಬೆಟ್ಟದಳ್ಳಿ, ಬೇಕನಳ್ಳಿ, ಕುಂದಳ್ಳಿ ಮುಖ್ಯರಸ್ತೆಯ ಬದಿಯಲ್ಲಿ ಕಂಬಗಳನ್ನು ಅಳವಡಿಸಿ ಹೊಸ ಮಾರ್ಗ ರಚಿಸಬೇಕು. ಅಥವಾ ಬಸವನಕಟ್ಟೆ, ನಗರಳ್ಳಿಯಿಂದ ರಸ್ತೆ ಬದಿಯಲ್ಲಿ ಕಂಬಗಳನ್ನು ಅಳವಡಿಸಿ ಕುಂದಳ್ಳಿ, ಕುಮಾರಳ್ಳಿಗೆ ವಿದ್ಯುತ್ ಒದಗಿಸಬೇಕು. ಆಗಸ್ಟ್ ಅಂತ್ಯದೊಳಗೆ ಈ ಕೆಲಸ ಆರಂಭವಾಗದಿದ್ದರೆ ಸೆಸ್ಕ್ ಕಚೇರಿ ಎದುರು ಗ್ರಾಮಸ್ಥರು ಆಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಗ್ರಾಮಸ್ಥರ ಮನವಿ ಅಲಿಸಿದ ಅಭಿಯಂತರರು, ಮುಂದಿನ ಎರಡು ದಿನದೊಳಗೆ ವಿದ್ಯುತ್ ಮಾರ್ಗಗಳನ್ನು ಸರಿಪಡಿಸಿ ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗುವುದು. ನೂತನ ಮಾರ್ಗ ಅಳವಡಿಕೆ ಸಂಬAಧ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಕುಮಾರಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯು.ಕೆ. ದೇಶ್ರಾಜ್, ಕುಂದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಕುಂದಳ್ಳಿ, ಬೆಟ್ಟದಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಜೆ. ತಮ್ಮಯ್ಯ, ಕುಮಾರಳ್ಳಿ ಗ್ರಾಮ ಸಮಿತಿ ಕಾರ್ಯದರ್ಶಿ ಕೆ.ಡಿ. ಕಿರಣ್, ಪ್ರಮುಖರಾದ ಯು.ಬಿ. ಗಿರೀಶ್, ಕೆ.ಈ. ಪ್ರದೀಪ್, ನವೀನ್, ಎಸ್.ವಿ. ದಕ್ಷಿತ್, ಶಶಿಕಾಂತ್, ಶರತ್, ಉದಯ್ಕುಮಾರ್, ಲೋಕೇಶ್, ಕೆ.ಕೆ. ಸುಧಾಕರ್, ಯು.ಡಿ. ಗೀತಾ ಸೇರಿದಂತೆ ಇತರರು ಭಾಗವಹಿಸಿದ್ದರು.