ಕರಿಕೆ, ಜು. ೩೦: ಆನೆದಂತ, ನವಿಲುಮೊಟ್ಟೆ, ಹಾಗೂ ಹರಳು ಕಲ್ಲನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿದಳ ಬಂಧಿಸಿದೆ.
ನಿನ್ನೆ ರಾತ್ರಿ ಕುಶಾಲನಗರದ ಆರ್ಎಂಸಿ ರಸ್ತೆ ಬದಿಯಲ್ಲಿ ಆರೋಪಿಗಳಾದ ಪ್ರಕಾಶ್, ನೂರುಳ್ಳಯ್ಯ, ವಿನೋದ್, ನೂರುಳ್ಳಯ್ಯ ಎಂಬವರುಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಯಾವುದೋ ವಸ್ತುಗಳನ್ನು ಸಂಶಯಾಸ್ಪದವಾಗಿ ಇಟ್ಟುಕೊಂಡು ಮಾರಾಟಮಾಡಲು ಹೊಂಚುಹಾಕುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ ಅರಣ್ಯ ಸಂಚಾರಿ ದಳ ನಾಲ್ವರನ್ನು ವಶಕ್ಕೆ ಪಡೆದು ಚೀಲವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಎರಡು ಸಣ್ಣ ಗಾತ್ರದ ಆನೆದಂತ, ಎರಡು ನವಿಲು ಮೊಟ್ಟೆ, ಎರಡು ಕೆ.ಜಿ ಹರಳುಕಲ್ಲು ಹಾಗೂ ಉರುಳು ಹಾಕಲು ಬಳಸುವ ಬೈಕ್ ಕೇಬಲ್ಗಳು ಪತ್ತೆಯಾಗಿದ್ದು, ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ. ಆರೋಪಿಗಳು ಮೂಲತಃ ಹುಣಸೂರು, ಹೆಚ್.ಡಿ.ಕೋಟೆ ತಾಲೂಕಿನವರಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ನಾಯಕ್ ಮಾರ್ಗ ದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಮ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಜಗದೀಶ್, ಶ್ರೀನಿವಾಸ್, ಮಂಜುನಾಥ, ವಾಹನ ಚಾಲಕ ಪ್ರಕಾಶ್ ಪಾಲ್ಗೊಂಡಿದ್ದರು.
-ಸುಧೀರ್ ಹೊದ್ದೆಟ್ಟಿ