ಸೋಮವಾರಪೇಟೆ, ಜು. ೩೦: ಪತ್ನಿಯೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ಸಂದರ್ಭ, ಸ್ಕೂಟರನ್ನು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಬರೋಬ್ಬರಿ ೬.೧೮ ಲಕ್ಷ ಹಣವನ್ನು ದರೋಡೆ ಮಾಡಿರುವ ಕುಕೃತ್ಯ ಪಟ್ಟಣ ಸಮೀಪದ ಕಿಬ್ಬೆಟ್ಟ ಗ್ರಾಮದ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಿಬ್ಬೆಟ್ಟ ಗ್ರಾಮ ನಿವಾಸಿ, ಪಟ್ಟಣದಲ್ಲಿ ವ್ಯಾಪಾರೋದ್ಯಮ ನಡೆಸುತ್ತಿರುವ ನೇಮರಾಜ್ ಹಾಗೂ ಪತ್ನಿ ಆಶಾ ಆವರುಗಳು ನಿನ್ನೆ ರಾತ್ರಿ ತಮ್ಮ ಸ್ಕೂಟರ್ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ, ಕಿಬ್ಬೆಟ್ಟ ರಸ್ತೆಯ ಸಾಕ್ಷಿ ಕನ್ವೆನ್ಷನ್ ಸಭಾಂಗಣದಿAದ ೨೦೦ ಮೀಟರ್ ದೂರದಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡ ದರೋಡೆ ನಡೆಸಿದೆ. ಸ್ಕೂಟರ್ಗೆ ಕಾರನ್ನು ಅಡ್ಡ ನಿಲ್ಲಿಸಿ ಕಣ್ಣಿಗೆ ಖಾರದ ಪುಡಿ ಎರಚಿ, ಪತ್ನಿ ಆಶಾ ಅವರ ಮೇಲೆ ಹಲ್ಲೆ ಮಾಡಿ ಬ್ಯಾಗ್ನಲ್ಲಿಟ್ಟಿದ್ದ ನಗದು ಸೇರಿದಂತೆ ಮೊಬೈಲ್ಗಳನ್ನು ಅಪಹರಿಸಿರುವುದಾಗಿ ಪೊಲೀಸ್ಗೆ ದೂರು ನೀಡಲಾಗಿದೆ.
(ಮೊದಲ ಪುಟದಿಂದ)
ಘಟನೆ ವಿವರ : ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಅನುಷಾ ಮಾರ್ಕೆಟಿಂಗ್ ಹೋಲ್ಸೇಲ್ ಮೊಬೈಲ್ ಕರೆನ್ಸಿ, ಮನಿ ಟ್ರಾನ್ಸ್ಫರಿಂಗ್ ವ್ಯವಹಾರ ಮಾಡಿಕೊಂಡಿರುವ ನೇಮರಾಜ್ ಅವರು, ಎಂದಿನAತೆ ನಿನ್ನೆಯೂ ವ್ಯವಹಾರ ಮುಗಿಸಿ, ಅಂಗಡಿಯಲ್ಲಿದ್ದ ಮೂರು ಮೊಬೈಲ್, ೬.೧೮ ಲಕ್ಷ ಹಣವನ್ನು ಬ್ಯಾಗ್ನಲ್ಲಿ ತುಂಬಿಸಿಕೊAಡು ತಮ್ಮ ಸ್ಕೂಟರ್ನಲ್ಲಿ ಪತ್ನಿಯೊಂದಿಗೆ ಮನೆಗೆ ತೆರಳುತ್ತಿದ್ದರು.
ಕಿಬ್ಬೆಟ್ಟ ಗ್ರಾಮದ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಎದುರು ಭಾಗದಿಂದ ಬಂದ ಕಾರೊಂದು ಒಮ್ಮೆಲೆ ಬಲಭಾಗಕ್ಕೆ ಚಲಿಸಿ ಸ್ಕೂಟಿಗೆ ಡಿಕ್ಕಿಯಾಗುವಂತೆ ಬಂದು ನಿಂತಿದೆ. ತಕ್ಷಣ ನೇಮರಾಜ್ ಅವರು ಸ್ಕೂಟಿಯನ್ನು ನಿಲ್ಲಿಸಿದ್ದಾರೆ. ಈ ಸಂದರ್ಭ ಕಾರಿನ ಹಿಂಬದಿಯಿAದ ಬೈಕ್ನಲ್ಲಿ ಈರ್ವರು ಬಂದಿದ್ದು, ಇದರಲ್ಲಿ ಹಿಂಬದಿ ಕುಳಿತಿದ್ದ ವ್ಯಕ್ತಿ ತನ್ನ ಕೈಯಲ್ಲಿದ್ದ ಖಾರದ ಪುಡಿಯನ್ನು ತೆಗೆದು ನೇಮರಾಜ್ ಅವರ ಮುಖಕ್ಕೆ ಎರಚಿದ್ದಾನೆ. ಹೆಲ್ಮೆಟ್ ಹಾಕಿದ್ದರಿಂದ ಮುಖದ ಭಾಗಕ್ಕೆ ಖಾರದ ಪುಡಿ ಬಿದ್ದಿದೆ. ಚಾಲಕನನ್ನು ಹೊರತುಪಡಿಸಿ ಕಾರಿನಲ್ಲಿದ್ದ ಇತರ ಮೂವರು ಸ್ಕೂಟರ್ ಬಳಿ ಬಂದು ಆಶಾ ಅವರ ಮೇಲೆ ಫ್ಲಾಸ್ಕ್ನಿಂದ ಹಲ್ಲೆ ನಡೆಸಿ, ಮೊಬೈಲ್ ಹಾಗೂ ಹಣವಿದ್ದ ಬ್ಯಾಗನ್ನು ಎತ್ತಿಕೊಂಡು ಕಾರು ಮತ್ತು ಬೈಕ್ ಮೂಲಕ ಸೋಮವಾರಪೇಟೆ ಪಟ್ಟಣದ ಕಡೆಗೆ ಪರಾರಿಯಾಗಿದ್ದಾರೆ.
ತಕ್ಷಣ ಸೋಮವಾರಪೇಟೆ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಕಾರ್ಯೋನ್ಮುಖರಾಗಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಪರಿಶೀಲಿಸಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಡಿವೈಎಸ್ಪಿ ಗಂಗಾಧರಪ್ಪ ಅವರುಗಳು ರಾತ್ರಿ ವೇಳೆಯೇ ಸೋಮವಾರಪೇಟೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಘಟನೆಯ ಬಗ್ಗೆ ನೇಮರಾಜ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ ೨೦೨೩ (ಯು/ಎಸ್-೩೧೦(೨) ಅಡಿಯಲ್ಲಿ ಒಟ್ಟು ಆರು ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಸಿನಿಮೀಯ ಮಾದರಿಯಲ್ಲಿ ನಡೆಸಿರುವ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಅಪರಾಧ ವಿಭಾಗದ ಪೊಲೀಸರು ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಇಂದೂ ಸಹ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದೂರುದಾರರನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಎಎಸ್ಪಿ ಹಾಗೂ ಡಿವೈಎಸ್ಪಿ ಅವರುಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ತೀವ್ರ ತನಿಖೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್.ಪಿ. ರಾಮರಾಜನ್ ತಿಳಿಸಿದ್ದಾರೆ.