ಮಡಿಕೇರಿ, ಜು. ೩೧: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಭಾರೀ ಮಳೆಯಿಂದ ಎದುರಾಗಿರುವ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿದ್ದು, ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿಯೂ ಜಿಲ್ಲೆಯ ಶಾಸಕರಿಬ್ಬರು ಸೋತಿದ್ದಾರೆ ಎಂದು ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಕುಟುಕಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಡಿಕೇರಿ ನಗರ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ರಾಜ್ಯ ಸರಕಾರದ ಜನವಿರೋಧಿ ಸುತ್ತೋಲೆ, ನೀತಿ ಹಾಗೂ ಹಗರಣಗಳ ವಿರುದ್ಧ ಖಂಡನಾ ನಿರ್ಣಯ ಮಂಡಿಸಿ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದ ಅಪಾರ ನಷ್ಟ ಸಂಭವಿಸುತ್ತಿದೆ. ಆದರೆ, ಸರಕಾರ ಯಾವುದೇ ಪರಿಹಾ ರೋಪಾಯ ಕೈಗೊಂಡಿಲ್ಲ. ೨೦೧೮ರಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ತ್ವರಿತ ಸ್ಪಂದನ ನೀಡಲಾಗಿತ್ತು. ಅನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೂರು ದಿನದಲ್ಲಿ

(ಮೊದಲ ಪುಟದಿಂದ) ರಾಜ್ಯ ವ್ಯಾಪಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿಯೂ ಸಮಸ್ಯೆಗೊಳಗಾದವರಿಗೆ ಸಮರ್ಪಕ ಹಾಗೂ ತ್ವರಿತವಾಗಿ ಪರಿಹಾರ ನೀಡಿ ನೊಂದವರ ಕಣ್ಣೀರೊರೆಸುವ ಕೆಲಸವಾಗಿದೆ. ಇಂದಿನ ಸರಕಾರ ಎಲ್ಲವನ್ನು ಮರೆತಿದೆ. ಮನೆ ಕುಸಿದ ಪ್ರಕರಣಕ್ಕೆ ಕೇವಲ ರೂ. ೧.೨೦ ಲಕ್ಷ ನೀಡಿ ಮೌನ ವಹಿಸಿದೆ. ಪರಿಹಾರ ನೀಡುವ ಬದಲು ಕೇಂದ್ರ ಸರಕಾರವನ್ನು ಕಾಂಗ್ರೆಸ್ ನಾಯಕರು ಬೊಟ್ಟು ಮಾಡಿ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಅತಿವೃಷ್ಟಿ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಕೊಡಗು ಜಿಲ್ಲೆಯ ಶಾಸಕರು ಜಿಲ್ಲೆಯ ಪರ ಕಾಳಜಿ ವಹಿಸಿಲ್ಲ ಎಂದು ದೂರಿದರು.

ಬೆಲೆ ಏರಿಕೆ ಕೊಡುಗೆ!

ಇಂಧನ ಸೇರಿದಂತೆ ಅಗತ್ಯ ಬೆಲೆ ಏರಿಕೆ, ಬಿಟ್ಟಿ ಭಾಗ್ಯಕ್ಕೆ ಹಣ ಹೊಂದಿಸಲು ಮದ್ಯದ ದರ ಏರಿಕೆ ಮಾಡಿರುವುದು ಕಾಂಗ್ರೆಸ್‌ನ ದೊಡ್ಡ ಕೊಡುಗೆ ಎಂದು ಲೇವಡಿ ಮಾಡಿದ ಅವರು, ಸ್ಟ್ಯಾಂಪ್ ಡ್ಯೂಟಿ, ಜಾಗದ ಮಾರುಕಟ್ಟೆ ಮೌಲ್ಯ ಹೆಚ್ಚಿಸಿ ಸರಕಾರ ಬಡವರಿಗೆ ಗಾಯದ ಮೇಲೆ ಬರೆಯನ್ನು ಎಳೆದಿದೆ. ಹಿಂದಿನ ಬಿಜೆಪಿ ಸರಕಾರದ ಕೊನೆ ಬಜೆಟ್‌ನಲ್ಲಿ ಕಾಡಾನೆ ಹಾವಳಿ ತಡೆಗೆ ರೂ. ೧೨೦ ಕೋಟಿ ಮೀಸಲಿಟ್ಟಿದ್ದೆವು. ಆದರೆ, ನೂತನ ಸರಕಾರ ಇದನ್ನು ಜಾರಿಗೊಳಿಸಿಲ್ಲ. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಕೇಂದ್ರ ಸರಕಾರ ಅನುದಾನ ನೀಡಿದೆ. ನಾವು ಶಾಸಕರಾಗಿದ್ದಾಗ ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ವಾರ್ಷಿಕ ವಿಶೇಷ ಪ್ಯಾಕೇಜ್ ನೀಡುತ್ತಿದ್ದೆವು. ಕಾಂಗ್ರೆಸ್ ಸರಕಾರ ಜನ ವಿರೋಧಿ ಸುತ್ತೋಲೆ ನೀಡಿದೆ ಎಂದು ವಾಗ್ದಾಳಿ ನಡೆಸಿದರು.

ಅಕ್ರಮ ಮುಚ್ಚಿ ಹಾಕುವ ಕೆಲಸ

ಜಿಲ್ಲೆಯಲ್ಲಿ ಪಾರಂಪರಿಕವಾಗಿ ಬಂದ ಅರಣ್ಯ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವುದು, ಮರಗಳ ಹಕ್ಕು ಕಸಿಯುವ ಯತ್ನ ಸುತ್ತೋಲೆ ಹಿಂಪಡೆಯಬೇಕೆAದು ಆಗ್ರಹಿಸಿದ ಬೋಪಯ್ಯ, ರಾಜ್ಯ ಸರಕಾರ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿದ್ದ ರೂ. ೧೭೨ ಕೋಟಿ ಹಣ ಅಕ್ರಮ ವರ್ಗಾವಣೆ ಮೂಲಕ ಸರಕಾರಿ ಖಜಾನೆಯನ್ನು ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಬಳಸಿಕೊಂಡಿರುವುದು ಖಾತ್ರಿಯಾಗಿದೆ. ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆ ಈ ಅಕ್ರಮ ನಡೆದಿರಲು ಸಾಧ್ಯವೇ ಇಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ ಸಾವಿರಾರು ಕೋಟಿ ಅಕ್ರಮ ನಡೆದಿದ್ದು, ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡಿಲ್ಲ. ಅಕ್ರಮ ಮುಚ್ಚಿ ಹಾಕುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ನೋವಿಗೆ ಸ್ಪಂದಿಸುತ್ತಿಲ್ಲ

ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಮಾತನಾಡಿ, ಮೋದಿ ಪ್ರಧಾನಿಯಾದ ನಂತರ ಭಾರತ ವಿಶ್ವಗುರುವಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡು ಪ್ರಗತಿಯಲ್ಲಿದೆ. ಅನಿವಾಸಿ ಭಾರತೀಯ ರಕ್ಷಣೆ ದೊರೆಯುತ್ತಿದೆ. ದೇಶ ಸದೃಢಗೊಂಡರೆ ಇಲ್ಲಿನ ನಾಗರಿಕರಿಗೆ ಗೌರವ ದೊರೆಯುತ್ತದೆ. ಈ ನಿಟ್ಟಿನ ಕೆಲಸ ಮೋದಿ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿಟ್ಟ ಜಾಗ ಪಡೆಯಲು ಅನುಮತಿ ಪಡೆಯಬೇಕು. ಆದರೆ, ಯಾವುದೇ ಅನುಮತಿ ಪಡೆಯದೆ ಮೈಸೂರಿನಲ್ಲಿ ಜಾಗ ಕಬಳಿಕೆ ಮಾಡಿಕೊಳ್ಳಲಾಗಿದೆ. ರಾಜ್ಯ ಸರಕಾರದ ಪ್ರಭಾವಿ ಸಚಿವರೊಬ್ಬರು ಗಾಳಿಬೀಡು ಗ್ರಾಮದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಭೂಪರಿವರ್ತನೆ ಮಾಡಿದ್ದಾರೆ. ಈ ಹಗರಣ ಸದ್ಯದಲ್ಲಿಯೇ ಹೊರಬರಲಿದೆ ಎಂದು ತಿಳಿಸಿದರು. ಹಾಲಿ ಶಾಸಕರು ಕೊಡಗಿನ ಅಭಿವೃದ್ಧಿಗೆ ನಯಾಪೈಸೆ ಅನುದಾನ ತಂದಿಲ್ಲ. ನಾವು ಶಾಸಕರಾಗಿದ್ದ ಸಂದರ್ಭ ನೀಡಿದ್ದ ಅನುದಾನ ಬಳಕೆ ಮಾಡಿಕೊಳ್ಳುವ ಕೆಲಸವಾಗಿದೆ. ಪ್ರಾಕೃತಿಕ ವಿಕೋಪದಿಂದ ಹಲವು ಗ್ರಾಮಗಳು ಕತ್ತಲಲ್ಲಿವೆ. ಜನರು ಸಂಕಷ್ಟದಲ್ಲಿದ್ದಾರೆ. ಶಾಸಕರುಗಳು ಜನರ ನೋವಿಗೆ ಸರಿಯಾಗಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಶಾಸಕರ ತವರು ಕ್ಷೇತ್ರ ಹುದಿಕೇರಿ ಪ್ಯಾಕ್ಸ್ ನಲ್ಲಿ ೧೨ ಸ್ಥಾನ ಬಿಜೆಪಿ ಗೆದ್ದಿರುವುದು ಜನವಿರೋಧಿ ನೀತಿಗೆ ಸಾಕ್ಷಿ ಎಂದು ಲೇವಡಿ ಮಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಪಕ್ಷ ಸಂಘಟನೆಗೆ ಮಂಡಲಗಳ ಸಹಕಾರ ಅತಿ ಮುಖ್ಯ. ತಾ. ೩ ರಂದು ರಾಜ್ಯ ಸರಕಾರದ ವಿರುದ್ಧ ನಡೆಯಲಿರುವ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜವಾಬ್ದಾರಿ ಹಂಚಿಕೆಯಿAದ ಪಕ್ಷ ಮತ್ತಷ್ಟು ಬಲವಾಗುತ್ತದೆ. ಎಸ್.ಟಿ ಮತ್ತು ಅಲ್ಪಸಂಖ್ಯಾತ ಮೋರ್ಚಾ ಹೊರತುಪಡಿಸಿ ಉಳಿದೆಲ್ಲ ಮೋರ್ಚಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಮೋರ್ಚಾಗಳು ಕೇವಲ ಪ್ರತಿಭಟನೆಗೆ, ಸಭೆಗೆ ಸೀಮಿತವಾಗದೆ ಕೇಂದ್ರ ಹಾಗೂ ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು.ಕೆಲಸ ಮಾಡದ ಬೂತ್ ಅಧ್ಯಕ್ಷರುಗಳನ್ನು ಬದಲಾಯಿಸಿ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಮುಂದಿನ ನಗರಸಭೆ ಚುನಾವಣೆಗೂ ಪೂರಕವಾಗಿ ಕೆಲಸ ಇಂದಿನಿAದಲೇ ಆರಂಭಿಸಬೇಕೆAದರು.

ಮೂರನೇ ಬಾರಿ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರನ್ನು ಅಭಿನಂದಿಸುವ ನಿರ್ಣಯವನ್ನು ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್ ಮಂಡಿಸಿದರು. ಕಾರ್ಯದರ್ಶಿ ಪ್ರಶಾಂತ್ ಭೀಮಯ್ಯ ಅನುಮೋದಿಸಿದರು. ಕೆ.ಜಿ. ಬೋಪಯ್ಯ ಮಂಡಿಸಿದ ನಿರ್ಣಯಕ್ಕೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನುಮೋದನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಕನ್ನಿಕೆ, ಖಜಾಂಚಿ ಕನ್ನಂಡ ಸಂಪತ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಕಾರೆರ ಕವನ್ ಕಾವೇರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.