ಮಡಿಕೇರಿ, ಜು. ೩೧: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಸಮಿತಿಯ ಜವಾಬ್ದಾರಿ ಈ ಬಾರಿ ಶ್ರೀ ಕೋಟೆಮಾರಿಯಮ್ಮ ದೇವಾಲಯಕ್ಕೆ ಸಿಕ್ಕಿದ್ದು, ಅಧ್ಯಕ್ಷರಾಗಿ ಜಿ.ಸಿ. ಜಗದೀಶ್ ಅಧಿಕಾರ ವಹಿಸಿಕೊಂಡರು.
ನಗರದ ಕೋದಂಡರಾಮ ದೇವಾಲಯ ಸಭಾಂಗಣದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ಕಳೆದ ಬಾರಿಯ ಅಧ್ಯಕ್ಷ ಹೆಚ್. ಮಂಜುನಾಥ್, ಜಿ.ಸಿ. ಜಗದೀಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರು ಎಲ್ಲಾ ಮಂಟಪ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ದಸರಾ ಉತ್ಸವ ಆಚರಿಸಲಾಗುವುದು. ಮಂಟಪಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಹೆಚ್. ಮಂಜುನಾಥ್ ಮಾತನಾಡಿ, ಜಿಲ್ಲಾಡಳಿತ, ದಸರಾ ಸಮಿತಿ, ಶಾಸಕರ ಸಹಕಾರದಿಂದ ಕಳೆದ ಬಾರಿ ದಸರಾವನ್ನು ಉತ್ತಮವಾಗಿ ನಡೆಸಲಾಗಿದೆ ಎಂದರು. ದಸರಾ ಸಮಿತಿಯಿಂದ ದಶಮಂಟಪ ಸಮಿತಿಗೆ ಸೂಕ್ತ ಮಾನ್ಯತೆ ಸಿಗಬೇಕೆಂದರು.
ಮೊಕದ್ದಮೆ - ಚರ್ಚೆ
ಡಿಜೆ ಬಳಕೆಗೆ ಸಂಬAಧಿಸಿದAತೆ ಕಳೆದ ಬಾರಿ ಮಂಟಪ ಸಮಿತಿಗಳ ಮೇಲೆ ಹೈಕೋರ್ಟ್ ವಕೀಲರೊಬ್ಬರು ಮೊಕದ್ದಮೆ ದಾಖಲಿಸಿದ್ದರಿಂದ ಮಂಟಪ ಸಮಿತಿಗಳು ದಂಡ ಕಟ್ಟುವಂತಾಯಿತು ಎಂಬ ವಿಚಾರ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಸಭೆಯಲ್ಲಿ ಮಾತನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಕಳೆದ ಬಾರಿ ಸರ್ವರ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ನಡೆದಿದ್ದು, ದಶಮಂಟಪ ಸಮಿತಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದರೆ ಡಿಜೆ ಸಂಬAಧ ಎಲ್ಲಾ ಮಂಟಪಗಳ ಮೇಲೆ ಮೊಕದ್ದಮೆ ದಾಖಲಿಸಿದ್ದರಿಂದ ಮಂಟಪ ಸಮಿತಿ ಯವರು ದಂಡ ಕಟ್ಟುವಂತಾಗಿದ್ದು, ಮಂಟಪ ಸಮಿತಿಗಳಿಗೆ ನೋವುಂಟು ಮಾಡಿದೆ ಎಂದರು. ಕೋಟೆ ಗಣಪತಿ ದೇವಾಲಯದ ಬಿ.ಎಂ. ರಾಜೇಶ್ ಮಾತನಾಡಿ, ಹೆಚ್ಚಿನ ಶಬ್ದದ ಡಿಜೆ ಬಳಸಿದ್ದರಿಂದ ಮಂಟಪಗಳ ಮೇಲೆ ಮಾತ್ರ ಮೊಕದ್ದಮೆ ದಾಖಲು ಮಾಡಲಾಗಿದೆ. ರಾತ್ರಿಯಿಂದ ಬೆಳಗ್ಗಿನವರೆಗೂ ದಸರಾ ವೇದಿಕೆಯಲ್ಲಿಯೂ ಹೆಚ್ಚಿನ ಶಬ್ದದ ಧ್ವನಿವರ್ಧಕ ಬಳಸಲಾಗಿತ್ತು. ಆದರೆ ಅದರ ವಿರುದ್ಧ ಯಾವುದೇ ಮೊಕದ್ದಮೆ ದಾಖಲು ಮಾಡಿಲ್ಲ ಎಂದರಲ್ಲದೆ ಸರ್ಕಾರಿ ಕಾರ್ಯಕ್ರಮಕ್ಕೆ ಹಾಗೂ ದಶಮಂಪಟಗಳ ಶೋಭಾಯಾತ್ರೆಗೆ ಬೇರೆ ಬೇರೆ ಕಾನೂನುಗಳಿವೆಯೆ ಎಂದು ಪ್ರಶ್ನಿಸಿದರು. ದಶಮಂಟಪ ಸಮಿತಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಒಗ್ಗಟ್ಟಾಗಬೇಕು. ಉತ್ಸವ ಆಚರಣೆ ಸಂಬAಧ ಅಗತ್ಯ ನಿಯಮಗಳನ್ನು ರೂಪಿಸಿ ಮಂಟಪಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕರವಲೆ ಭಗವತಿ ದೇವಾಲಯದ ಗಜೇಂದ್ರ ಮಾತನಾಡಿ, ದಶಮಂಟಪಗಳ ಶೋಭಾಯಾತ್ರೆ ಯಿಂದ ದಸರಾ ಉತ್ಸವ ಮೆರುಗು ಪಡೆದುಕೊಳ್ಳುತ್ತಿದೆ. ಈ ಹಿನ್ನೆ¯ ೆಯಲ್ಲಿಯೇ ದಸರಾ ಉತ್ಸವಕ್ಕೆ ಸರ್ಕಾರ ಅನುದಾನ ಒದಗಿಸುತ್ತಿದೆ. ಹೀಗಿದ್ದರೂ ಮಂಟಪ ಸಮಿತಿಗಳಿಗೆ ಸೂಕ್ತ ಅನುದಾನ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಡಿಜೆ ಬಳಿಸಿದರೆ ಮೊಕದ್ದಮೆ ದಾಖಲಾಗುವುದಿಲ್ಲ. ಆದರೆ ಮಡಿಕೇರಿ ದಸರಾದಲ್ಲಿ ಮಾತ್ರ ಮಂಟಪಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಇದು ಯಾವ ನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಟೆ ಗಣಪತಿ ದೇವಾಲಯದ ವಿಕ್ಕಿ ಮಾತನಾಡಿ, ನಗರದಲ್ಲಿ ತಡೆಗೋಡೆ ಕಾಮಗಾರಿಯೊಂದಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡಿ ಅದು ಪೋಲಾಗುತ್ತಿದೆ. ಆದರ ಬಗ್ಗೆ ಚಕಾತವೆತ್ತದವರು ಮಂಟಪ ಸಮಿತಿಗಳಿಗೆ ಅನುದಾನ ನೀಡಲು ಹಿಂದೇಟು ಹಾಕುತ್ತಾರೆ. ದಶಮಂಟಪ ಸಮಿತಿ ಮಂಟಪ ಸಮಿತಿಗಳ ಪರವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ದಶಮಂಟಪಗಳ ವೈಭವ ಕಳೆಗುಂದುವುದರಲ್ಲಿ ಸಂದೇಹವಿಲ್ಲ ಎಂದು ನುಡಿದರು.
ವೇದಿಕೆಯಲ್ಲಿ ದಶಮಂಟಪ ಸಮಿತಿ ಗೌರವಾಧ್ಯಕ್ಷ ಮನು ಮಂಜುನಾಥ್, ಕೋದಂಡರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜುAಡ, ಕೋದಂಡರಾಮ ದೇವಾಲಯದ ಈ ಬಾರಿಯ ದಸರಾ ಉತ್ಸವ ಸಮಿತಿ ಅಧ್ಯಕ್ಷ ಕುಶಾಲ್, ಕಳೆದ ಬಾರಿ ಅಧ್ಯಕ್ಷ ಗೋಪಿನಾಥ್, ದಶಮಂಟಪ ಸಮಿತಿ ಖಜಾಂಚಿ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಉಪಸ್ಥಿತರಿದ್ದರು.