ಸೋಮವಾರಪೇಟೆ, ಜು. ೩೧: ರೋಟರಿ ಸಂಸ್ಥೆ ವತಿಯಿಂದ ಶವ ಶ್ಶೆತ್ಯಾಗಾರದ ಪೆಟ್ಟಿಗೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಹಸ್ತಾಂತರ ಕಾರ್ಯಕ್ರಮ ಇಲ್ಲಿನ ರೋಟರಿ ಭವನದಲ್ಲಿ ನಡೆಯಿತು.

ಶೈತ್ಯಾಗಾರದ ಪಟ್ಟಿಗೆಯನ್ನು ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ನಿರ್ವಹಣೆಗೆ ಶಾಸಕ ಡಾ. ಮಂತರ್ ಗೌಡ ಹಸ್ತಾಂತರಿಸಿ ಮಾತನಾಡಿ, ಇಂದು ಸತ್ತ ನಂತರ ಮೃತದೇಹವನ್ನು ಒಂದೆರಡು ದಿನಗಳ ಕಾಲ ಸಂರಕ್ಷಿಸಿ ಇಡಲು ಶ್ಶೆತ್ಯಾಗಾರದ ಅವಶ್ಯಕತೆ ಹೆಚ್ಚಾಗಿದೆ. ಉಳ್ಳವರು ಹೆಚ್ಚು ಹಣ ನೀಡಿ ನಗರ ಪ್ರದೇಶದಿಂದ ತರುತ್ತಾರೆ. ಆದರೆ ಬಡವರಿಗೆ ಕಷ್ಟವಾಗುವುದನ್ನು ಮನಗಂಡ ರೋಟರಿ ಸಂಸ್ಥೆ ಸದಸ್ಯರು ಮತ್ತು ದಾನಿಗಳ ನೆರವಿನಿಂದ ಶೈತ್ಯಾಗಾರವನ್ನು ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.

ಮೈಸೂರಿನ ಗೋಪಾಲ್ ಗೌಡ ಆಸ್ಪತ್ರೆಯ ಮಾಲೀಕರಾದ ಶುಶ್ರೂತ್‌ಗೌಡ ಮಾತನಾಡಿ, ರೋಟರಿ ಸಂಸ್ಥೆಯ ಸೇವೆಗಳು ಸಾವಿರಾರು ಬಡ ಕುಟುಂಬಗಳಿಗೆ ತಲುಪುತ್ತಿವೆ. ಯಾವುದೇ ಚಿಕ್ಕ ಕೆಲಸವನ್ನಾದರೂ ಅದು ಹೆಚ್ಚಿನವರಿಗೆ ತಲುಪುವಂತೆ ಮಾಡುವುದು ಮಹತ್ಕಾರ್ಯವಾಗುತ್ತದೆ ಎಂದರು.

ಶವ ಶೈತ್ಯಾಗಾರದ ಪೆಟ್ಟಿಗೆಯನ್ನು ಮೋಟಾರು ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರಿಗೆ ಶಾಸಕರು ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ಜೆ.ಕೆ. ಪೊನ್ನಪ್ಪ ವಹಿಸಿದ್ದರು. ಈ ಸಂದರ್ಭ ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ, ವಲಯ ಸೇನಾನಿ ಎಂ.ಎA. ಪ್ರಕಾಶ್ ಕುಮಾರ್, ನಿಕಟಪೂರ್ವ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ಪಿ.ಕೆ. ರವಿ ಮತ್ತಿತರರು ಇದ್ದರು.

ಶವ ಶೈತ್ಯಾಗಾರದ ಪೆಟ್ಟಿಗೆಯನ್ನು ಕ್ಲಬ್ ರಸ್ತೆಯ ಸಂಘದ ಕಚೇರಿಯಲ್ಲಿ ಇರಿಸಲಾಗುವುದು. ಯಾರಿಗಾದರೂ ಅವಶ್ಯಕತೆ ಇದ್ದಲ್ಲಿ ೯೮೪೪೪೬೧೧೩೪, ೯೭೪೦೫೦೮೧೮೧ ಮತ್ತು ೯೪೪೮೩೨೫೯೭೫ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮೋಟಾರು ಮಾಲೀಕರು ಮತ್ತು ಚಾಲಕರ ಸಂಘದ ಮಾಜೀ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದರು.