ಗೋಣಿಕೊಪ್ಪಲು, ಜು. ೩೧: ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡಗಿನ ಸಾಂಪ್ರದಾಯಿಕ ಹಬ್ಬ ಆಚರಿಸುವಂತಾಗಬೇಕು ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಹೇಳಿದರು.

ಗೋಣಿಕೊಪ್ಪಲುವಿನ ಅಮ್ಮಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜ ಬಾಂಧವರು ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನವಾಗಿ ಕಕ್ಕಡ ನಮ್ಮೆಯನ್ನು ಆಗಸ್ಟ್ ೪ರಂದು ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಕ್ಕಡ ನಮ್ಮೆ ಅಂಗವಾಗಿ ಸಮಾಜ ಬಾಂಧವರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇದರಿಂದ ಕೊಡಗಿನ ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜ ಬಾಂಧವರು ತಮ್ಮನ್ನು ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದರು.

ಸಭೆಯಲ್ಲಿ ಅಮ್ಮಕೊಡವ ಸಮಾಜದ ಉಪಾಧ್ಯಕ್ಷರಾದ ಮುರುಳಿ ಕರುಂಬಮ್ಮಯ್ಯ, ಕಾರ್ಯದರ್ಶಿಗಳಾದ ಅನಿಲ್ ಪ್ರಸಾದ್, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಖಜಾಂಚಿ ಅಮ್ಮತ್ತಿರ ಗಣೇಶ್ ಸ್ವಾಗತಿಸಿ, ನಿರ್ದೇಶಕಿ ಮನ್ನಕ್ಕಮನೆ ಶ್ವೇತಾ ವಂದಿಸಿದರು.

ಸಭೆಯಲ್ಲಿ ನಿರ್ದೇಶಕರುಗಳಾದ ಹೆಮ್ಮಚ್ಚಿಮನೆ ಆಶಿತಾ, ಸುಬ್ರಮಣಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.