ಪೊನ್ನಂಪೇಟೆ, ಜು. ೩೧: ಪೊನ್ನಂಪೇಟೆ ತಾಲೂಕಿನ ಮಳೆಹಾನಿ ಪ್ರದೇಶಗಳಾದ ಶ್ರೀಮಂಗಲ, ಕುಟ್ಟ, ಗೋಣಿಕೊಪ್ಪಲು ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರೀ ಮಳೆಯಿಂದಾಗಿ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳೇಂಗಡ ಕಿಶನ್ ಎಂಬವರಿಗೆ ಸೇರಿದ ಮನೆಯ ಅರ್ಧಭಾಗ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಸುಜಾ ಕುಶಾಲಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಳ್ಳಂಗಡ ಜಮುನಾ, ಚೇಂದAಡ ದೀಪಕ್, ಬೋಡಂಗಡ ನರೇಂದ್ರ, ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್, ಪಿಡಿಓ ಸತೀಶ್, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

ಕುಟ್ಟ - ಮಂಚಳ್ಳಿ ರಸ್ತೆಯಲ್ಲಿ ಬರೆಕುಸಿತಗೊಂಡ ಸ್ಥಳವನ್ನು ಎಂಎಲ್‌ಸಿ ಸುಜಾ ಕುಶಾಲಪ್ಪ ವೀಕ್ಷಿಸಿದರು. ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಂಗಲ್ ಗ್ರಾಮದ ಅನೀಸ್ ಎಂಬುವರ ಮನೆಯ ತಡೆಗೋಡೆ ಮಳೆಯಿಂದಾಗಿ ಕುಸಿದು ಬಿದ್ದು, ಸ್ಕೂಟಿ ಹಾಗೂ ಬೈಕ್‌ವೊಂದು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲನೆ ನಡೆಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ತಿತೀರ ತೀರ್ಥ, ಪಿಡಿಓ ಅನಿಲ್ ಕುಮಾರ್, ವಾರ್ಡ್ ಸದಸ್ಯೆ ದಿವ್ಯ ಇದ್ದರು.

ಈ ಸಂದರ್ಭ ಮಾತನಾಡಿದ ಕುಶಾಲಪ್ಪ ಅವರು, ಕಳೆದ ೨೦ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಜನ ತತ್ತರಿಸುವಂತಾಗಿದೆ. ಕೊಡಗಿನಲ್ಲಿ ಮಳೆಯಾದರೆ ಮಾತ್ರ ಕೆಲ ಹೊರ ಜಿಲ್ಲೆಗಳಿಗೆ ನೀರಿನ ಸೌಲಭ್ಯ ದೊರೆಯುತ್ತದೆ. ಆದರೆ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ರೈತರು, ಬೆಳೆಗಾರರು ಹಾಗೂ ಜನರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಮನೆಹಾನಿ, ಸೇತುವೆ, ರಸ್ತೆ ಸಂಪರ್ಕ ಕಡಿತ, ವಿದ್ಯುತ್ ಕಡಿತ, ಕಾಫಿ ಬೆಳೆ ನಷ್ಟ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕೊಡಗಿನ ಜನತೆಯ ಬಗ್ಗೆ ರಾಜ್ಯ ಸರಕಾರ ಗಮನ ಹರಿಸಿ ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸುವೀನ್ ಗಣಪತಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಂಜು ಗಣಪತಿ, ತಾಲೂಕು ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ, ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ, ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಸಾಮಾಜಿಕ ಜಾಲತಾಣ ಕಾರ್ಯಕಾರಿ ಸದಸ್ಯ ಸುನಿಲ್ ರೈ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಜಿ, ಜಿಲ್ಲಾ ಓಬಿಸಿ ಸದಸ್ಯ ಅಕ್ಷಯ್, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.