ಕಣಿವೆ, ಜು. ೩೧: ಕೊಡಗು ಜಿಲ್ಲೆಯಲ್ಲಿ ಪುಷ್ಯ ಮಳೆ ಸೃಷ್ಟಿಸಿರುವ ಮಳೆ ಹಾನಿ ಹಾಗೂ ಇತರ ಅವಾಂತರಗಳ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಜೆಡಿಎಸ್ ನ ಕೊಡಗು ಜಿಲ್ಲಾ ಎನ್.ಡಿ.ಎ ಕೋರ್ ಕಮಿಟಿ ಅಧ್ಯಕ್ಷ ಸಿ.ಎಲ್.ವಿಶ್ವ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡ ಬಗ್ಗೆ ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷರೂ ಆದ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ ‘ಶಕ್ತಿ’ಗೆ ತಿಳಿಸಿದ್ದಾರೆ.
ಈ ಬಾರಿ ಕಾವೇರಿ ನದಿಯ ಪ್ರವಾಹ ಕುಶಾಲನಗರದ ಬಡಾವಣೆಗಳಲ್ಲಿ ಯಾವ ರೀತಿ ಹಾನಿ ಸೃಷ್ಟಿ ಮಾಡಿದೆ. ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿ ಮಳೆ ಹಾನಿಯಾಗಿದೆ. ತಾನು ಮುಖ್ಯ ಮಂತ್ರಿಯಾಗಿದ್ದ ೨೦೧೮ ರ ಅವಧಿಯಲ್ಲಿ ಕುಶಾಲನಗರದ ಎಲ್ಲಾ ನೆರೆ ಸಂತ್ರಸ್ತ ಕುಟುಂಬದವರಿಗೆ ತಲಾ ೫೦ ಸಾವಿರ ರೂ.ಗಳ ಪರಿಹಾರದ ಹಣವನ್ನು ನೀಡಿದ ಹಾಗೆ ಈ ಸರ್ಕಾರ ಏನಾದರೂ ಕೊಟ್ಟಿದೆಯಾ ?
ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಿದ ಬಗ್ಗೆ ವಿಶ್ವ ತಿಳಿಸಿದರು. ಸಚಿವರಿಗೆ ಪ್ರತಿಕ್ರಿಯಿಸಿದ ವಿಶ್ವ, ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿ ಕೃಷಿಕರು ಬಹಳಷ್ಟು ನಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಬಾಳುವ ಕೃಷಿ ಚಟುವಟಿಕೆಗಳು ಮಳೆ ಹಾನಿಗೆ ತುತ್ತಾಗಿವೆ.
ಜಿಲ್ಲೆಯ ಕಾವೇರಿ ಹಾಗೂ ಹಾರಂಗಿ ನದಿ ದಂಡೆಗಳಲ್ಲಿ ಪ್ರವಾಹ ಬಂದು ಅಪಾರ ಮನೆಗಳಿಗೆ ನೀರು ತುಂಬಿ ಹಾಳಾಗಿದ್ದರೂ ಸರ್ಕಾರ ಯಾವೊಂದು ಪರಿಹಾರದ ಕ್ರಮಗಳನ್ನು ಇದೂವರೆಗೂ ಕೈಗೊಂಡಿಲ್ಲ. ಜಿಲ್ಲೆಯ ಶಾಸಕರು ಕೇವಲ ಪ್ರಚಾರದಲ್ಲಿ ಮಾತ್ರ ನಿರತರಾಗಿದ್ದಾರೆ. ಜಿಲ್ಲಾಡಳಿತದಿಂದ ಯಾವೊಬ್ಬ ಸಂತ್ರಸ್ತರಿಗೂ ಯಾವುದೇ ಕೃಷಿಕನಿಗೂ ಪರಿಹಾರದ ಮೊತ್ತ ನೀಡಿಲ್ಲ. ಜನ ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದರು.