ಐಗೂರು, ಜು. ೩೧: ಪ್ರಕೃತಿಯ ನಿಯಮದಂತೆ ವರ್ಷದಲ್ಲಿ ೪ ತಿಂಗಳು ಬೇಸಿಗೆ ಕಾಲ, ೪ ತಿಂಗಳು ಮಳೆಗಾಲ, ೪ ತಿಂಗಳು ಚಳಿಗಾಲವಿದ್ದು, ವರ್ಷದಲ್ಲಿ ೧೨ ತಿಂಗಳು ಹವಾಮಾನದಲ್ಲಿ ವೈಪರೀತ್ಯ ಕಂಡುಬರುತ್ತದೆ. ಆ ನಿಯಮದಂತೆ ಜಿಲ್ಲೆಯಲ್ಲಿರುವ ನದಿ ಪಾತ್ರಗಳಲ್ಲಿ ಬೇಸಿಗೆ ಸಮಯದಲ್ಲಿ ನೀರಿನ ಹರಿಯುವಿಕೆಯು ಬತ್ತಿಹೋಗಿ ಜನರಿಗೆ ಕುಡಿಯುವ ನೀರಿನ ಅಭಾವವುಂಟಾದಾಗ, ಮಳೆಗಾಗಿ ಜಿಲ್ಲಾಧ್ಯಂತ ಜನರು ವರುಣ ದೇವನನ್ನು ಪ್ರಾರ್ಥಿಸುತ್ತಾರೆ. ಜಿಲ್ಲೆಯ ಭಕ್ತರ ಪ್ರಾರ್ಥನೆಯನ್ನು ಆಲಿಸಿದ ವರುಣದೇವನು ಜುಲೈ ತಿಂಗಳಿನಲ್ಲಿ ಎಡಬಿಡದೆ ಆರ್ಭಟಿಸಿ ಜಿಲ್ಲೆಯಲ್ಲಿರುವ ಎಲ್ಲಾ ನದಿ ಕೊಳಗಳನ್ನು ತುಂಬಿ ಹರಿಸಿದ್ದಾನೆ. ಈಗ ಅದೇ ಭಕ್ತರು ವರುಣದೇವನಲ್ಲಿ ೧೫ ದಿನಗಳ ಕಾಲ ಜಿಲ್ಲೆಯಲ್ಲಿ ಗಾಳಿ-ಮಳೆಯಿಂದ ಆಸ್ತಿಪಾಸ್ತಿ ಹಾನಿಗಳು ಸಂಭವಿಸುತ್ತಿದ್ದು, ವಿದ್ಯುತ್ ಇಲ್ಲದೆ ಇಡೀ ಜಿಲ್ಲೆಯು ಸ್ತಬ್ಧವಾಗಿದ್ದು, ಆದಷ್ಟು ಬೇಗ ಮಳೆಯ ಆರ್ಭಟವನ್ನು ನಿಲ್ಲಿಸು ಎಂದು ಜಿಲ್ಲಾಧ್ಯಂತ ಪ್ರಾರ್ಥಿಸುತ್ತಿದ್ದಾರೆ. ಆದ್ದರಿಂದ ನಾವು ದೇವರಲ್ಲಿ ಪ್ರಾರ್ಥಿಸಬಹುದೇ ವಿನಹ ಪ್ರಕೃತಿಯ ನಿಯಮಗಳು ಬದಲಾಗಲು ಸಾಧ್ಯವಿಲ್ಲ ಎಂಬುದಕ್ಕೆ ಬತ್ತಿ ಹೋಗಿ ತುಂಬಿ ಹರಿಯುತ್ತಿರುವ ಹರದೂರು ಹೊಳೆ ಸಾಕ್ಷಿಯಾಗಿದೆ.