ಕೂಡಿಗೆ, ಜು. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದಲ್ಲಿರುವ ಹಾರಂಗಿ ಮುಖ್ಯ ನಾಲೆಗೆ ನಾಲೆಯ ಸಮೀಪದ ಭಾರೀ ಮಣ್ಣು ಕುಸಿದಿದೆ. ಸ್ಥಳಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಮದಲಾಪುರ ಸಮೀಪದಲ್ಲಿ ಕಟ್ ಅಂಡ್ ಕವರ್‌ನ ಸ್ಥಳದಲ್ಲಿ ಶೇಕಡ ೫೦ ಭಾಗದಷ್ಟು ಕಾಮಗಾರಿಯು ನಡೆದಿದ್ದು, ಎರಡು ಕಡೆಗಳಿಂದಲೂ ಭಾರೀ ಪ್ರಮಾಣದ ಮಣ್ಣು ಕುಸಿತದಿಂದಾಗಿ ಅಚ್ಚುಕಟ್ಟು ಪ್ರದೇಶ ರೈತರಿಗೆ ನಾಟಿ ಬೇಸಾಯಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಸ್ಥಳೀಯ ಗ್ರಾಮಸ್ಥರ ಮನವಿಯ ಮೇರೆಗೆ ಭೇಟಿ ನೀಡಿದ್ದರು.

ನಾಲೆಗೆ ಬಿದ್ದಿರುವ ಮಣ್ಣನ್ನು ಅತಿ ಶೀಘ್ರವಾಗಿ ತೆರವುಗೊಳಿಸಬೇಕು. ಸ್ಥಳೀಯ ಗ್ರಾಮಸ್ಥರ ಕುಡಿಯುವ ನೀರಿನ ವ್ಯವಸ್ಥೆಯ ಪೈಪ್‌ಲೈನ್, ಕಿರು ಸೇತುವೆ ಮತ್ತು ದಾರಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸಬೇಕು. ನಾಲೆಯ ನೀರು ಸಮರ್ಪಕವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ತಲುಪುವಂತೆ ವ್ಯವಸ್ಥೆ ಮಾಡಬೇಕೆಂದು ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಈ ಸಂದರ್ಭ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಅಭಿಯಂತರ ಸಿದ್ದರಾಜ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯರಾದ ಟಿ.ಪಿ. ಹಮೀದ್, ರತ್ನಮ್ಮ, ರವಿ, ನೀರಾವರಿ ಸಲಹಾ ಸಮಿತಿಯ ಸದಸ್ಯೆ ಉಮಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಅಣ್ಣಯ್ಯ, ರೈತ ಮುಖಂಡರಾದ ಗಣೇಶ್, ಚಿದಾನಂದ, ಸ್ವಾಮಿ, ಪಾಂಡು, ಸೇರಿದಂತೆ ಹಲವಾರು ಮಂದಿ ರೈತರು ಇದ್ದರು.