ಸೋಮವಾರಪೇಟೆ, ಆ. ೨: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ತಾ. ೧೮ರಂದು ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಕೆ. ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯.೩೦ ರಿಂದ ೧೨.೩೦ರ ವರೆಗೆ ಮಹಾಸಭೆ ನಡೆಯಲಿದೆ. ಮಧ್ಯಾಹ್ನ ೨ರಿಂದ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ೪.೩೦ಕ್ಕೆ ಮತ ಎಣಿಕೆ ನಡೆಯಲಿರುವುದಾಗಿ ತಿಳಿಸಿದರು. ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಸಂಘದಲ್ಲಿ ತಮ್ಮ ಸದಸ್ಯತ್ವವನ್ನು ನವೀಕರಿಸಿ ರಶೀದಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ತಾ. ೪ರ ಸಂಜೆ ೫ ಗಂಟೆಯವರೆಗೆ ಸಂಘದ ಕಚೇರಿಯಲ್ಲಿ ಸದಸ್ಯತ್ವ ನವೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಂಘದ ವಾರ್ಷಿಕ ಸಭೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ತಿಳಿಸಿದರು.
ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಉಪಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಲು ತಾ. ೭ ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೩ರ ವರೆಗೆ ಸಂಘದ ಕಚೇರಿಯಲ್ಲಿ ಅವಕಾಶ ಇದೆ. ತಾ. ೮ರಂದು ನಾಮಪತ್ರ ಪರಿಶೀಲನೆ ಮತ್ತು ನಾಮಪತ್ರ ಹಿಂದಕ್ಕೆ ಪಡೆಯಲು ಮತ್ತು ಅಂದೇ ಚುನಾವಣೆಯ ಚಿಹ್ನೆಯನ್ನು ಪಡೆಯಬಹುದು. ಮತದಾನಕ್ಕೆ ೨೦೨೪ರ ಸದಸ್ಯತ್ವ ನವೀಕರಣದ ರಶೀದಿಯೊಂದಿಗೆ ಮತ ಚಲಾಯಿಸಬೇಕೆಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಎಂ. ಅಬ್ದುಲ್ ಕರೀಂ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಉಪ ಕಾರ್ಯದರ್ಶಿ ಪಿ.ಎನ್. ರಮೇಶ್, ಖಜಾಂಚಿ ಸುದೀಪ್ ಆಲ್ಬರ್ಟ್ ಮತ್ತು ಸಹ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ಇದ್ದರು.