ಕುಶಾಲನಗರ, ಆ.೨: ಕುಶಾಲನಗರ ತಾಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿ ತಟದಲ್ಲಿ ನೆಲೆಸಿರುವ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರ ಶಾಸಕರು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಆಡಳಿತ ಮಂಡಳಿಯ ತುರ್ತು ಸಭೆ ನಡೆಯಿತು.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ತೆಪ್ಪದ ಕಂಡಿ ಬಳಿ ಕಾವೇರಿ ನದಿ ನೀರಿನ ಪ್ರಮಾಣ ಪ್ರತಿ ವರ್ಷ ಅಪಾಯದ ಅಂಚು ಮೀರಿ ಹರಿಯುತ್ತಿದ್ದು ಇದರಿಂದ ಅಲ್ಲಿನ ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ. ಈ ಸಂಬAಧ ಅಲ್ಲಿ ನೆಲೆಸಿರುವ ೨೨ ಮನೆಗಳ ನಿವಾಸಿಗಳನ್ನು ಸ್ಥಳಾಂತರಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಂಚಾಯಿತಿ ಅಧ್ಯಕೆÀ್ಷ ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು.
ಕೆಲವೊಂದು ನಿವಾಸಿಗಳಿಗೆ ಈಗಾಗಲೇ ಬಸವನಹಳ್ಳಿ ಬಳಿ ನಿವೇಶನ ಗುರುತಿಸಿ ನೀಡಲಾಗಿದ್ದರೂ, ಫಲಾನುಭವಿಗಳು ಮತ್ತೆ ನದಿ ತಟದಲ್ಲಿ ನೆಲೆಸಿರುವ ಬಗ್ಗೆ ಚರ್ಚಿಸಲಾಯಿತು.
ಈ ಬಗ್ಗೆ ಸಮರ್ಪಕ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ನಂತರ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿದೆ.
ನದಿ ಪ್ರವಾಹದಿಂದ ಸಂತ್ರಸ್ತರಾದ ನಿವಾಸಿಗಳಿಗೆ ಈಗಾಗಲೇ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸಭೆಗೆ ಮಾಹಿತಿ ಒದಗಿಸಿದರು. ಮೈಸೂರು ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭ ಆಸ್ತಿ ಕಳೆದುಕೊಳ್ಳುವ ಜನರಿಗೆ ಈಗಾಗಲೇ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಮುಖಾಂತರ ನಿವೇಶನ ಕೊಡುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಟ್ಟು ಮಾದಪ್ಪ ಮತ್ತು ಸದಸ್ಯರು ಇದ್ದರು.