ಕಣಿವೆ, ಆ. 1: ಈ ಬಾರಿಯಂತು ಪುನರ್ವಸು ಮಳೆ ಕಾದು ಬೆಂಡಾಗಿದ್ದ ಭೂಮಿಯನ್ನು ತಂಪೆರೆಸಿ, ಹಳ್ಳ - ಕೊಳ್ಳ, ಕೆರೆ - ಕಟ್ಟೆಗಳನ್ನು ತುಂಬಿ ಹರಿಸಿತು.

ಅಷ್ಟೇ ಅಲ್ಲ, ನಿರೀಕ್ಷೆಗೂ ಮೀರಿದ ಮಳೆ ಸುರಿಸಿದ ಪರಿಣಾಮ ನದಿಗಳ ಹರಿವನ್ನು ಅಪಾಯದ ಮಟ್ಟಕ್ಕೆ ಒಯ್ದು ಮಂದಿಯನ್ನು ಹೈರಾಣಾಗಿಸಿತು. ಇದರಿಂದಾಗಿ ಜಿಲ್ಲಾಡಳಿತ ನದಿಗಳಂಚಿನ ತಗ್ಗು ಪ್ರದೇಶಗಳ ನಿವಾಸಿಗಳಿಗೆ ತಾತ್ಕಾಲಿಕವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಪುನರ್ವಸತಿ ಕಲ್ಪಿಸಿತು.

ಈ ಹಿಂದಿನ ವರ್ಷಗಳಲ್ಲಿ ಸುರಿದ ಆಶ್ಲೇಷಾ ಮಳೆಗೆ ಕಾವೇರಿ ಹಾಗೂ ಹಾರಂಗಿ ನದಿಗಳಲ್ಲಿ ಪ್ರವಾಹ ಬಂದು ಅವಾಂತರ ಸೃಷ್ಟಿಸಿತ್ತು. ಆದರೆ ಈ ಬಾರಿ ಪುನರ್ವಸು ಜನರ ನಿರೀಕ್ಷೆಯನ್ನು ಹುಸಿಗೊಳಿಸುವಷ್ಟು ಸುರಿದು ಸರಿಯಿತು.

ಕಾವೇರಿ ಉಕ್ಕಿ ಹರಿದ ಪರಿಣಾಮ ಪ್ರತೀ ವರ್ಷದಂತೆ ಈ ಬಾರಿಯೂ ಕುಶಾಲನಗರದ ಕೆಲವೊಂದು ಬಡಾವಣೆಗಳ ಮಂದಿ ಮಳೆಗೆ ಅಂಜಿ ಬೇರೆಡೆಗೆ ತಾತ್ಕಾಲಿಕವಾಗಿ ಬದಲಿ ವಸತಿ ವ್ಯವಸ್ಥೆಯನ್ನು ಕೈಗೊಳ್ಳುತ್ತಿದ್ದುದು ಕಂಡುಬAತು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಎಡೆಬಿಡದೇ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ತಗ್ಗು ಪ್ರದೇಶಗಳ ಮನೆಗಳ ಮಂದಿ ಮನೆಗಳಲ್ಲಿನ ಪೀಠೋಪಕರಣಗಳನ್ನು ಬದಲಿ ಸ್ಥಳಕ್ಕೆ ಒಯ್ಯುವ ಹರಸಾಹಸ ಮಾಡಿದರೆ, ಕೆಲವರು ಮೇಲಂತಸ್ತಿನ ಮನೆಗಳಲ್ಲಿ ಕೆಳಮನೆಯ ಸರಂಜಾಮುಗಳನ್ನು ತ್ರಾಸದಿಂದ ಒಯ್ದರು.

ಮತ್ತೆ ಕೆಲವರು ಮಳೆಗಾಲ ಮುಗಿವವರೆಗೂ ಒಂದಷ್ಟು ದಿನಗಳ ಅವಧಿಗೆ ಬಾಡಿಗೆ ಮನೆಗಳಿಗೆ ತೆರಳಿದರು. ಈ ಬಾರಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಪುನರ್ವಸು ಅಷ್ಟೇನು ಸುರಿಯದ ಕಾರಣ ಕೇವಲ 15 ರಿಂದ 20 ಕ್ಯೂಸೆಕ್ಸ್ಗಳಷ್ಟು ನೀರನ್ನು ಮಾತ್ರ ನದಿಗೆ ಹರಿಬಿಡಲಾಯಿತು. ಇದರಿಂದಾಗಿ ಹಾರಂಗಿ ನದಿಯಂಚಿನ ನಿವಾಸಿಗಳು ನಿಟ್ಟುಸಿರು ಬಿಡುವ ವಾತಾವರಣ ನಿರ್ಮಾಣವಾಗಿತ್ತು.

ಕಾವೇರಿಯನ್ನು ದೂಡುವ ಹಾರಂಗಿ

ಈ ಹಿಂದೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿದು ಯತೇಚ್ಛ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದಾಗ ಗರಿಷ್ಠ 80 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಟ್ಟಾಗ ಕೂಡಿಗೆ ಭಾಗದಲ್ಲಿ ಅನೇಕ ಜನವಸತಿ ಜಲಾವೃತವಾಗಿತ್ತು.

ಆದರೆ ಈ ಬಾರಿ 2017 ರಲ್ಲಿ ಸುರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿಯೂ ಸುರಿದ ಪರಿಣಾಮ ಕಾವೇರಿ ನದಿ ಸಹಜವಾಗಿ ಕಾವು ಏರಿ ಹರಿಯಿತು.

ಈ ಕಾವೇರಿಯ ಹರಿವು ಹಾರಂಗಿ ನದಿ ವಿಲೀನವಾಗುವ ಹಳೆ ಕೂಡಿಗೆ ಬಳಿ ನಿಧಾನಗತಿಯಲ್ಲಿ ಕಾವೇರಿ ನದಿಯನ್ನು ದೂರಕ್ಕೆ ದೂಡಿ ಹರಿವ ಕಾರಣ ಕಾವೇರಿ ಕುಶಾಲನಗರದ ಮಾದಾಪಟ್ಟಣದವರೆಗೂ ಹಿಮ್ಮುಖಗೊಂಡು ತನ್ನೊಡಲಿನ ತಗ್ಗು ಪ್ರದೇಶಗಳಿಗೆ ಸರಿಯುವ ಕಾರಣ ಕುಶಾಲನಗರ ಪಟ್ಟಣದ ಜನವಸತಿ ಜಲಾವೃತಗೊಳ್ಳುತ್ತಿದೆ.

ಪ್ರತೀ ವರ್ಷವೂ ವ್ಯಾಪಕ ಹಾನಿ

ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶಗಳ ನೆರೆ ಸಂತ್ರಸ್ತ ಮಂದಿ ಕಳೆದ ನಾಲ್ಕಾರು ವರ್ಷಗಳಿಂದಲೂ ನಷ್ಟ ಹಾಗೂ ಸಂಕಷ್ಟಕ್ಕೆ ಸಿಲುಕುತ್ತಿರುವುದು ಮಾತ್ರ ಬೇಸರದ ಸಂಗತಿ.

ಏಕೆAದರೆ, ಪ್ರತೀ ವರ್ಷವೂ ಮಳೆಗಾಲದಲ್ಲಿ ನೆರೆ ಬರುವ ಕಾರಣ ಮನೆಗಳನ್ನು ಖಾಲಿ ಮಾಡಬೇಕು. ಅಥವಾ ಮನೆಯೊಳಗಿನ ಪೀಠೋಪಕರಣಗಳನ್ನು ಜೋಪಾನವಾಗಿಡಬೇಕು.

ಈ ಎರಡೂ ಕೆಲಸಕ್ಕೆ ಅನಗತ್ಯವಾಗಿ ಈ ಮಂದಿಗೆ ಹೊರೆಯಾಗುತ್ತಿದೆ. ಜೊತೆಗೆ ಮನೆಗಳು ಜಲಾವೃತಗೊಂಡು ನೀರು ಇಳಿದ ಬಳಿಕ ಆ ಮನೆಗಳನ್ನು ತೊಳೆದು ಶುಚಿಗೊಳಿಸಿ ಮತ್ತೆ ಹೊಸದಾಗಿ ಪೈಂಟ್ ಮಾಡಿಸುವಲ್ಲಿ ಇಲ್ಲಿನ ಮಂದಿಗೆ ತಲಾ ಒಂದು ಲಕ್ಷಕ್ಕೂ ಹೆಚ್ಚಿನ ಹಣ ಖರ್ಚಾಗುತ್ತಿದ್ದು ಈ ಅನಗತ್ಯ ಹೊರೆಯಿಂದ ಮಂದಿ ಹೈರಾಣಾಗಿದ್ದಾರೆ.

ನದಿಯಂಚಿನ ತಗ್ಗುಪ್ರದೇಶಗಳಲ್ಲಿ ನಿವೇಶನಗಳನ್ನು ಖರೀದಿಸಿದ್ದು ತಪ್ಪು ಎಂದು ಕೊರಗುವ ಮೊದಲು ಅಲ್ಲಿ ಮನೆಗಳನ್ನು ಕಟ್ಟಲು ಅನುಮತಿ ನೀಡಿದ ಸ್ಥಳೀಯ ಪ್ರಾಧಿಕಾರಗಳ ಮೇಲೆ ಜನ ಹಿಡಿಶಾಪ ಹಾಕುವಂತಾಗಿದೆ.

ಬರ್ತಾರೆ - ಹೋಗ್ತಾರೆ : ಪ್ರಯೋಜನ ಶೂನ್ಯ ?

ಮಳೆಗಾಲದಲ್ಲಿ ಜಲಾವೃತಗೊಳ್ಳುವ ಬಡಾವಣೆಗಳನ್ನು ನೋಡಲು ರಾಜಕಾರಣಿಗಳು, ಶಾಸಕ - ಸಂಸದರು, ಮಂತ್ರಿ, ಮಹೋದಯರುಗಳು ಬರುತ್ತಾರಾದರೂ, ಈ ಮಂದಿಗೆ ಪ್ರಯೋಜನ ಶೂನ್ಯ. 2017 ರಲ್ಲಿ ಮೊದಲ ಬಾರಿಗೆ ಜಲಾವೃತಗೊಂಡಿದ್ದ ಕುಶಾಲನಗರದ ನೆರೆ ಸಂತ್ರಸ್ತರಿಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ತಲಾ 50 ಸಾವಿರ ರೂಪಾಯಿಗಳ ಪರಿಹಾರದ ಚೆಕ್‌ಗಳನ್ನು ನೀಡಿದ್ದರು.

ಆದರೆ ಇತ್ತೀಚೆಗೆ ಬಾಧಿಸುತ್ತಿರುವ ನೆರೆಗೆ ಯಾವ ಮಂತ್ರಿ ಮಹೋದಯರು ಕೂಡ ನಯಾ ಪೈಸೆ ಪರಿಹಾರ ಕೊಡುತ್ತಿಲ್ಲ. ಪಟಾಲಾಂ ಗಳೊಂದಿಗೆ ಸ್ಥಳಕ್ಕೆ ಬಂದು ಏನೋ ಮಾಡುವ ಮಾತುಗಳಾಡಿ ಪ್ರಚಾರ ಗಿಟ್ಟಿಸಿ ಹೋಗ್ತಾರೆ ಅಷ್ಟೆ.

ಶುಕ್ರವಾರ ಸಂಜೆ ಕುಶಾಲನಗರದ ನೆರೆ ಪೀಡಿತ ಬಡಾವಣೆಗಳಿಗೆ ಸಂಸದ ಮಹಾರಾಜರು ಧಾವಿಸಿದರೆ, ನಾನೇನು ಕಡಿಮೆ ಎಂಬAತೆ ರಾತ್ರಿ ಶಾಸಕ ವೈದ್ಯರು ಬಂದು ಹೋಗಿದ್ದಾರೆ.

ಆದರೆ, ಇದೂವರೆಗೂ ಯಾವೊಬ್ಬ ಜನಪ್ರತಿನಿಧಿಗಳು, ಉಸ್ತುವಾರಿ ಮಂತ್ರಿಗಳು, ಸ್ಥಳೀಯ ಆಡಳಿತ ಸಂಸ್ಥೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನದಿಯಂಚಿನಲ್ಲಿ ಪ್ರವಾಹ ಬಾರದಂತೆ ತಡೆಗಟ್ಟುವ, ನಿರಾಶ್ರಿತರಿಗೆ ಪರ್ಯಾಯ ಮಾರ್ಗೋಪಾಯಗಳು ಶಾಶ್ವತವಾದ ಯೋಜನೆಗಳನ್ನು ರೂಪಿಸುವ ಕನಿಷ್ಟ ಯೋಚನೆಯನ್ನೇ ಮಾಡದಿರುವುದು ಮಾತ್ರ ವ್ಯವಸ್ಥೆಯ ದುರಂತವೆನ್ನದೇ ವಿಧಿಯಿಲ್ಲ.

ಆದರೂ ಅಮಾಯಕ ಮಂದಿ ನೆರೆ ಸಂತ್ರಸ್ತರು ಪ್ರತೀ ವರ್ಷದ ಮಳೆಗಾಲದಲ್ಲಿ ಅಯ್ಯೋ ನಮ್ ಪರಿಸ್ಥಿತಿ ಹೀಗಾಗ್ತಾ ಇದೆ. ನಮಗೆ ಬದಲೀ ವ್ಯವಸ್ಥೆ ಮಾಡಿಕೊಡಿ ಎಂದು ಆಳುವವರಲ್ಲಿ ಯಾಚಿಸುವುದೂ ಮಾತ್ರ ದಯನೀಯ.

- ಕೆ.ಎಸ್. ಮೂರ್ತಿ, ಕಣಿವೆ.