ನಾಪೋಕ್ಲು: ನಾಪೋಕ್ಲು-ಬೆಟ್ಟಗೇರಿ ,ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿಯಲ್ಲಿ ಕಾವೇರಿ ನದಿ ನೀರಿನ ಪ್ರವಾಹ ಇಳಿಮುಖಗೊಂಡಿದೆ. ಗುರುವಾರ ಬೆಳಿಗ್ಗೆ ವಾಹನಗಳು ಸಂಚರಿಸುವAತಾಗಿದೆ. ಕಳೆದ ಎರಡು ದಿನಗಳಿಂದ ರಸ್ತೆಯಲ್ಲಿ ಪ್ರವಾಹ ಏರ್ಪಟ್ಟು ಸಂಚಾರ ಸ್ಥಗಿತಗೊಂಡಿದ್ದು ಇದೀಗ ಮಳೆ ಕಡಿಮೆಯಾದ ಹಿನೆÀ್ನಲೆಯಲ್ಲಿ ವಾಹನಗಳ ಸಂಚಾರ ಪುನರಾರಂಭಗೊAಡಿದೆ.
ಪ್ರವಾಹದಿAದಾಗಿ ರಸ್ತೆಯ ಒಂದು ಭಾಗದಲ್ಲಿ ಹೆಚ್ಚಿನ ಮಣ್ಣು ಕುಸಿತ ಉಂಟಾಗಿ ಅಪಾಯ ಮಟ್ಟಕ್ಕೆ ತಲುಪಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ. ಇದೇ ಸ್ಥಳದಲ್ಲಿ ಕೇಬಲ್ ಅಳವಡಿಸಲು ತೆಗೆದ ಚರಂಡಿ ಮಣ್ಣು ಕುಸಿದಿದ್ದು ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ. ಗುರುವಾರ ಬೆಳಿಗ್ಗೆ ಸ್ಥಳೀಯರಾದ ರಫೀಕ್ ಕೆ. ಯು, ಅಬ್ದುಲ್ಲಾ ಪಿ.ಎಂ, ಮಹಮ್ಮದ್ ಕೆ.ಎ, ಮುನೀರ್ ಹಮೀದ್ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದನ್ನು ಕಂಡು ಬ್ಯಾರಿಕೇಡ್, ಹಾಗೂ ರಿಬ್ಬನ್ ಅಳವಡಿಸಿ ಅಪಘಾತಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.
ಪರಿಸ್ಥಿತಿಯನ್ನು ಅರಿತು ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾರ್ಮಿಕರನ್ನು ಬಳಸಿ ತಾತ್ಕಾಲಿಕವಾಗಿ ಮರಳಿನ ಚೀಲಗಳನ್ನು ಇಟ್ಟು ಹೆಚ್ಚಿನ ಅನಾಹುತ ಆಗದ ಹಾಗೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಭಿಯಂತರ ಸಿದ್ದೇಗೌಡ ಮಾತನಾಡಿ ಇಲ್ಲಿ ರಸ್ತೆ ಕುಸಿಯುವ ಹಂತದಲ್ಲಿದೆ. ಮುಂದೆ ರಸ್ತೆಯನ್ನು ಎತ್ತರಿಸಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ತಾತ್ಕಾಲಿಕವಾಗಿ ಮರಳಿನ ಚೀಲವನ್ನು ಇಟ್ಟು ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದರು.
ಈ ಸಂದರ್ಭ ಅಭಿಯಂತರರುಗಳಾದ ಗಿರೀಶ್, ಸತೀಶ್, ಸಿಬ್ಬಂದಿ ಮಣಿ ಚಂಗಪ್ಪ ಇದ್ದರು.
ಮಳೆಯ ಬಿರುಸು ಕಡಿಮೆಯಾಗಿದ್ದು ಹಲವೆಡೆ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದೆ. ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ಪ್ರವಾಹ ಇನ್ನು ತಗ್ಗಿಲ್ಲ. ಬಿರುಸಿನ ಮಳೆಯಿಂದಾಗಿ ಹಲವು ತೋಟಗಳಲ್ಲಿ ನೀರು ನಿಂತಿದ್ದು ಕೊಳೆರೋಗ ಕಾಣಿಸಿಕೊಂಡಿದೆ. ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಉದುರುತ್ತಿದೆ. ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಬೆಳೆಗಾರರು, ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.