ನಾಪೋಕ್ಲು, ಆ. ೨: ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ತಾ. ೪ ರಂದು ಆಟಿಡೊಂಜಿ ದಿನ -೨೦೨೪ ಕಾರ್ಯಕ್ರಮವನ್ನು ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ ಹೇಳಿದರು.

ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬಿಲ್ಲವ ಸಮಾಜದ ಸಂಘದ ಉದ್ಘಾಟನೆ ನಡೆಯಲಿದೆ. ಆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಬಳಿಕ ಬಿಲ್ಲವ ಸಮಾಜದ ಮಹಾಸಭೆ ನಡೆಯಲಿದೆ. ನಾಪೋಕ್ಲು ಹೋಬಳಿ ಮಟ್ಟದಲ್ಲಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆಟಿಡೊಂಜಿ ದಿನ-೨೦೨೪ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ೧೧ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಆಟಿ ಮಾಸದಲ್ಲಿ ತಯಾರಿಸುವ ವಿಶೇಷ ಖಾದ್ಯಗಳ ತಿನಿಸುಗಳ ಪ್ರದರ್ಶನ ಹಾಗೂ ಊಟೋಪಚಾರ ಹಮ್ಮಿಕೊಳ್ಳಲಾಗಿದೆ ಎಂದ ಅವರು, ನಿರಂತರವಾಗಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದ್ದು ಕನಿಷ್ಟ ೫೦ ಯೂನಿಟ್ ರಕ್ತ ಸಂಗ್ರಹಿಸುವ ಉದ್ದೇಶವನ್ನು ಹೊಂದಿದ್ದೇವೆ. ಮಧ್ಯಾಹ್ನ ಬಿಲ್ಲವ ಸಮಾಜದ ವಾರ್ಷಿಕ ಮಹಾಸಭೆ ನಡೆಯಲಿದ್ದು ಸಮಾಜ ಬಾಂಧವರಿಗಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ರಕ್ತನಿಧಿ ಅಧಿಕಾರಿ ಡಾ. ಕರುಂಬಯ್ಯ, ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್, ನೋಟರಿ ವಕೀಲರಾದ ದಯಾ ಹೊನ್ನಪ್ಪ, ಮೂರ್ನಾಡುವಿನ ಉದ್ಯಮಿ ಸುರೇಶ್ ಮುತ್ತಪ್ಪ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಪೂವಪ್ಪ, ೫೦ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ರಾಮಪ್ಪ ಪೊಲೀಸ್, ಸಿವಿಲ್ ಕಂಟ್ರಾಕ್ಟರ್ ಗೋಪಾಲ ಮೂರ್ನಾಡು, ನಿವೃತ್ತ ಪೊಲೀಸ್ ಅಧಿಕಾರಿ ಲಿಂಗಪ್ಪ ಮೂರ್ನಾಡು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಸಮಾಜದ ಕಾರ್ಯದರ್ಶಿ ರೋಹಿತ್, ಸಂಘಟನಾ ಕಾರ್ಯದರ್ಶಿ ಬಿ.ಎಸ್. ನಾಗರಾಜ್, ಖಜಾಂಚಿ ಬಿ.ಡಿ. ದೀಪಕ್, ಸದಸ್ಯರಾದ ಪುನೀತ್, ಸದಸ್ಯ ಬಿ.ಎಸ್. ದಿಲೀಪ್ ಉಪಸ್ಥಿತರಿದ್ದರು.