ಮಡಿಕೇರಿ, ಆ. 1: ಪ್ರತಿ ಮಳೆಗಾಲದಲ್ಲಿಯೂ ಪ್ರವಾಹ ಪರಿಸ್ಥಿತಿಯಿಂದ ಜನರು ಸಂಕಷ್ಟಕ್ಕೀಡಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರ ಶಾಶ್ವತ ಯೋಜನೆ ರೂಪಿಸಬೇಕು. ಜೊತೆಗೆ ಅತಿವೃಷ್ಟಿಯಿಂದ ಬೆಳೆ ನಾಶಗೊಂಡ ಪ್ರಕರಣಕ್ಕೆ ಹೆಕ್ಟೇರ್‌ಗೆ ಕನಿಷ್ಟ ರೂ. 1 ಲಕ್ಷ ಪರಿಹಾರ ನೀಡಬೇಕೆಂದು ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ ಒತ್ತಾಯಿಸಿದರು. ಜಿಲ್ಲೆಯ ವಿವಿಧ ಕಡೆಗಳ ಮಳೆಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಮಂಗಳೂರು ಹೆದ್ದಾರಿ ನಡುವಿನ ಕರ್ತೋಜಿ ಬರೆ ಕುಸಿತ ಪ್ರದೇಶ ವೀಕ್ಷಿಸಿ ಬಳಿಕ ನಗರದ ಜಿಲ್ಲಾಡಳಿತ ಭವನ ಎದುರಿನ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
2018 ರಿಂದ ಕೊಡಗು ಭಾಗದಲ್ಲಿ ಭೂಕುಸಿತ, ನೆರೆ ಹಾವಳಿಯಿಂದ ಜನರು ತತ್ತರಿಸಿದ್ದು, ಭೂಕುಸಿತ ತಡೆಗೆ ಸರಕಾರ ಶಾಶ್ವತ ಕ್ರಮಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶ ವಾಸಿಗಳಿಗೆ ಪರ್ಯಾಯ ಜಾಗ ನೀಡಿ ವಸತಿ ಕಲ್ಪಿಸಬೇಕು. ಮಳೆಯಿಂದ ಮನೆ ಕಳೆದುಕೊಂಡವರಿಗೆ ಬಾಡಿಗೆ ಹಣ ತ್ವರಿತವಾಗಿ ನೀಡುವುದರೊಂದಿಗೆ ಮನೆ ನಿರ್ಮಾಣಕ್ಕೆ ಸಹಾಯ ಒದಗಿಸಬೇಕು ಎಂದ ಅವರು, ರಾಜ್ಯ ಸರಕಾರದಿಂದ ಪರಿಹಾರ ಸಮರ್ಪಕವಾಗಿ ದೊರೆಯುತ್ತಿಲ್ಲ. ಕೇವಲ ಪರಿಹಾರ ಕೇಂದ್ರ ಮಾತ್ರ ಜಿಲ್ಲೆಯಲ್ಲಿ ಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿ ಭೂಕುಸಿತ ತಡೆಗಟ್ಟುವಲ್ಲಿಯೂ ವಿಫಲವಾಗಿದೆ ಎಂದು ದೂರಿದರು. ಬೆಳೆ ನಾಶಕ್ಕೆ ನಮ್ಮ ಸರಕಾರವಿದ್ದಾಗ ರೂ. 26 ಸಾವಿರ ಪರಿಹಾರ ನೀಡಲಾಗುತಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ 1 ಹೆಕ್ಟೇರ್ ಬೆಳೆ ನಾಶಕ್ಕೆ ರೂ. 1 ಲಕ್ಷ ಪರಿಹಾರ ನೀಡಬೇಕು. ತಾ. 2 ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಇದನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
(ಮೊದಲ ಪುಟದಿಂದ) ರಾಜ್ಯ ಸರಕಾರದಿಂದ ಗ್ಯಾರಂಟಿ ಹಣ ಸಿಗುತ್ತಿಲ್ಲ. ಸಾಲದ ಗ್ಯಾರಂಟಿ ಸರಕಾರ ನೀಡುತ್ತಿದೆ. ಇವೆಲ್ಲ ವಿಷಯಗಳ ಕುರಿತು ಪ್ರತಿಪಕ್ಷವಾಗಿ ನಾವು ಗಮನ ಸೆಳೆಯುತ್ತೇವೆ. ಕೊಡಗಿಗೆ ಆದ್ಯತೆ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಗುಮ್ಮಟ್ಟಿರ ಕಿಲನ್ ಗಣಪತಿ, ಕಾಂಗೀರ ಸತೀಶ್, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾಪಂಗಡ ಯಮುನಾ ಚಂಗಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ಜಿಲ್ಲಾಧಿಕಾರಿ ಜೊತೆ ಮಾತುಕತೆ : ಅಶ್ವತ್ಥ ನಾರಾಯಣ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರೊಂದಿಗೆ ಮಳೆಗಾಲ ಪರಿಸ್ಥಿತಿ ನಿರ್ವಹಣೆ ಸಂಬAಧ ಸಮಾಲೋಚನೆ ನಡೆಸಿದರು. ಹೆದ್ದಾರಿಗಳಲ್ಲಿ ತಡೆಗೋಡೆ ಸಮರ್ಪಕವಾಗಿಲ್ಲ. ನರೇಗಾದಲ್ಲಿ ಪ್ರಾತಿನಿದ್ಯ ವಹಿಸಿ ಈ ಕೆಲಸ ಮಾಡಿಸುವಂತಾಗಬೇಕು. ಅಪಾಯದ ಸ್ಥಳದಲ್ಲಿ ನೆಲೆಸಿರುವವರನ್ನು ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಸರಕಾರಿ ಜಾಗ ಗುರುತಿಸಿ ಅಥವಾ ಖಾಸಗಿ ಜಾಗ ಖರೀದಿಸಿ ವಸತಿ ಕಲ್ಪಿಸುವ ಕೆಲಸವಾಗಬೇಕು. ಪರಿಹಾರಗಳನ್ನು ತ್ವರಿತವಾಗಿ ನೀಡಬೇಕು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಮಳೆಯಿಂದ ಜನತೆ ಆರ್ಥಿಕ ಸಂಕಷ್ಟದಲ್ಲಿದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು 3-4 ತಿಂಗಳು ಸಾಲ ಮರುಪಾವತಿಗೆ ಕಿರುಕುಳ ನೀಡದಂತೆ ನಿರ್ದೇಶನ ನೀಡಬೇಕು. ಮಳೆ ಸಂತ್ರಸ್ತರಿಗೆ ತ್ವರಿತ ಪರಿಹಾರ ದೊರೆಯುತ್ತಿಲ್ಲ ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ಗೆ ಮಳೆಹಾನಿ ನಿರ್ವಹಣೆಗೆ ಕನಿಷ್ಟ 50 ಸಾವಿರ ಅನುದಾನ ನೀಡಬೇಕು. ಜೊತೆಗೆ ಮಡಿಕೇರಿ ಘನತ್ಯಾಜ್ಯ ವಿಲೇವಾರಿ ಜಾಗದ ವಿವಾದ ಬಗೆಹರಿಸುವಂತೆ ಕೋರಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಅಭ್ಯತ್ ಮಂಗಲದಲ್ಲಿ 12 ಎಕರೆ ಜಾಗ ನೀಡಲಾಗಿದ್ದು, ಅಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಜಾಗ ಹಂಚಿಕೆ ಮಾಡಬೇಕೆಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಕ್ರಿಯಿಸಿ, ಅಪಾಯದ ಸ್ಥಳದಲ್ಲಿ ವಾಸವಿರುವವರ ಸ್ಥಳಾಂತರಕ್ಕೆ ಕ್ರಮವಹಿಸಲಾಗುವುದು. ಬೆಳೆನಾಶ ಸಂಬAಧ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸದ್ಯದಲ್ಲಿ ವರದಿ ದೊರೆಯಲಿದೆ. ಕಾಫಿ ಮಂಡಳಿ ಈ ಕುರಿತು ಕ್ರಮಕೈಗೊಳ್ಳುತ್ತದೆ. ಮೈಕ್ರೋ ಫೈನಾನ್ಸ್ ಸಾಲ ಮರುಪಾವತಿ ಬಗ್ಗೆ ನಿರ್ದೇಶನ ನೀಡಲಾಗುತ್ತದೆ. ಪರಿಹಾರದೊಂದಿಗೆ ಮನೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸರಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಮಾಹಿತಿ ಒದಗಿಸಿದರು.