ಶ್ರೀಲಂಕಾದಲ್ಲಿ ನಡೆದ ಪಂದ್ಯ

ಮಡಿಕೇರಿ, ಆ. ೨: ಶ್ರೀಲಂಕಾ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ವತಿಯಿಂದ ಅಲ್ಲಿನ ಸಿಲೋನ್‌ನಲ್ಲಿ ಜರುಗಿದ ಸಿಲೋನ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಬ್ಯಾಡ್ ಮಿಂಟನ್ ಚಾಂಪಿಯನ್ ಶಿಪ್-೨೦೨೪ರಲ್ಲಿ ಮಡಿಕೇರಿ ಯವರಾದ ತಾತಪಂಡ ಜ್ಯೋತಿ ಸೋಮಯ್ಯ ಅವರು ಎರಡು ಬೆಳ್ಳಿಯ ಪದಕದ ಸಾಧನೆ ಮಾಡಿದ್ದಾರೆ.

ಸಿಂಗಲ್ಸ್ನಲ್ಲಿ ೬೦+ ವಿಭಾಗದಲ್ಲಿ ಹಾಗೂ ಕಂಬೈನ್ಡ್ ಮಿಕ್ಸೆಡ್ ಡಬಲ್ಸ್ನ ೧೩೦+ವಿಭಾಗದಲ್ಲಿ ಜ್ಯೋತಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಮಹಿಳಾ ಕಂಬೈನ್ಡ್ ಡಬಲ್ಸ್ನ ೧೦೦+ ವಿಭಾಗದಲ್ಲೂ ಇವರು ಸ್ಪರ್ಧಿಸಿದ್ದರು. ಈ ವಿಭಾಗದಲ್ಲಿ ಕರ್ನಾಟಕದವರಾದ ಗೀತಾ ಹಾಗೂ ೧೩೦+ ವಿಭಾಗದಲ್ಲಿ ಗುಜರಾತ್‌ನವರಾದ ೭೬ ವರ್ಷದ ಡರಾಯಸ್ ಸ್ಪೂರ್ತಿ ಅವರು ಇವರ ಜೋಡಿಯಾಗಿದ್ದರು. ಈ ಸಾಧನೆಯಿಂದ ಇವರಿಗೆ ಜಪಾನ್‌ನಲ್ಲಿ ನಡೆಯುವ ಪಂದ್ಯಾವಳಿಗೂ ಅವಕಾಶ ದೊರೆತಿದೆ. ತಮ್ಮ ಸಾಧನೆಗೆ ತರಬೇತುದಾರರಾಗಿರುವ ಅರುಣ್ ಹಾಗೂ ಕೂರ್ಗ್ ಫಿಟ್ನೆಸ್ ಜಿಮ್‌ನ ಪ್ರದೀಪ್ ಹಾಗೂ ಸಹೋದರಿಯ ಪ್ರೋತ್ಸಾಹ-ಉತ್ತೇಜನ ಸಹಕಾರಿಯಾಗಿದೆ.

ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆಯುವುದು ತಮ್ಮ ಗುರಿ ಎಂದು ಜ್ಯೋತಿ ಪ್ರತಿಕ್ರಿಯಿಸಿದ್ದಾರೆ.