ಸಿದ್ದಾಪುರ, ಆ.೨: ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ೩೦೦ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ನಾಪತ್ತೆಯಾಗಿರುವ ದಾರುಣ ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಭೂ ಕುಸಿತವಾದ ಪ್ರದೇಶಕ್ಕೆ ಮಂಗಳವಾರ ಬೆಳಿಗ್ಗೆ ಸಿದ್ದಾಪುರದ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಸಂಘಟನೆಯ ೮ ಮಂದಿ ಯುವಕರು ಆ್ಯಂಬ್ಯುಲೆನ್ಸ್ ಮೂಲಕ ಹಾಗೂ ಜಿಲ್ಲೆಯ ವಿವಿಧ ಭಾಗದ ೧೨ ಮಂದಿ ವಿವಿಧ ವಾಹನಗಳಲ್ಲಿ ಘಟನಾ ಸ್ಥಳಕ್ಕೆ ತೆರಳಿ ಎರಡು ತಂಡಗಳಾಗಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಸ್ಥಳೀಯರ ಜತೆಗೆ ಸೇರಿದ ಒಂದು ತಂಡ ಕೆಸರಿನ ಮಣ್ಣಿನಡಿಯಲ್ಲಿ ಸಿಲುಕಿದ್ದ ೧೮ ಮೃತದೇಹಗಳನ್ನು ಹಾಗೂ ಮೃತ ಶರೀರದಿಂದ ಬೇರ್ಪಟ್ಟಿದ್ದ ಅಂಗಾಗವನ್ನು ಮಣ್ಣಿನಿಂದ ಹೊರತೆಗೆದರು. ಮತ್ತೊಂದು ತಂಡ ಎನ್‌ಡಿಆರ್‌ಎಫ್ ಜತೆಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಪ್ರಥಮ ದಿನದ ಕಾರ್ಯಾಚರಣೆ ಬಳಿಕ ರಾತ್ರಿ ಜಿಲ್ಲೆಗೆ ಮರಳಿದ ೬ ಮಂದಿಯ ತಂಡ ಎರಡನೇ ದಿನ ಜನರೇಟರ್, ಡ್ರಿಲ್ಲಿಂಗ್ ಯಂತ್ರ, ಕಾಂಕ್ರೀಟ್ ಕಟ್ಟರ್ ಹಾಗೂ ಮರ ಕಟ್ಟರ್ ಯಂತ್ರಗಳೊAದಿಗೆ ಆ್ಯಂಬ್ಯುಲೆನ್ಸ್ನಲ್ಲಿ ಮತ್ತೆ ತೆರಳಿ ಸ್ಥಳೀಯರಿಗೆ ಸಹಾಯ ಮಾಡಿದರು. ೧೨ ಮಂದಿಯ ಮತ್ತೊಂದು ತಂಡ ಮೃತಶರೀರಗಳನ್ನು ಹೊರತೆಗೆಯಲು ಸ್ಥಳೀಯರ ಜತೆಗೆ ಕೈ ಜೋಡಿಸಿತು. ಒಟ್ಟು ಎರಡು ದಿನದ ಸೇವೆಯಲ್ಲಿ ಸಿದ್ದಾಪುರ, ನೆಲ್ಯಹುದಿಕೇರಿ, ಕೊಡ್ಲಿಪೇಟೆ, ಮಾಪಿಳೆತೋಡು ಭಾಗದ ಒಟ್ಟು ೧೮ ಮಂದಿ ಭಾಗಿಯಾಗಿದ್ದರು ಎಂದು ವಿಖಾಯ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಮುಸ್ಲಿಯಾರ್ ‘ಶಕ್ತಿ’ಗೆ ಮಾಹಿತಿ ನೀಡಿದರು.

ಭೂ ಕುಸಿತವಾದಾಗ ಬಂಡೆ ಕಲ್ಲುಗಳ ರಭಸಕ್ಕೆ ಶರೀರದ ಭಾಗಗಳು ಬೇರ್ಪಟ್ಟಿರುವಾಗೆ ಇದೆ. ಬಹಳಷ್ಟು ಮೃತದೇಹಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ನೂರಾರು ಮೃತದೇಹಗಳು ಇನ್ನೂ ಕೆಸರಿನ ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಭಾರತೀಯ ಸೇನೆಯ ಸೇವೆ ಅಪಾರವಾದದ್ದು ಹಾಗೂ ವಿವಿಧ ಸ್ವಯಂ ಸೇವಕರ ತಂಡಗಳು ಎನ್.ಡಿ.ಆರ್.ಎಫ್ ಜತೆಗೆ ಸೇರಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವುದಾಗಿ ವಿಖಾಯ ತಂಡದ ಷಂಶುದ್ದೀನ್ ತಿಳಿಸಿದರು.

ಅಗತ್ಯ ವಸ್ತುಗಳ ಪೂರೈಕೆ: ಭೂ ಕುಸಿತದಿಂದಾಗಿ ಸಾವಿರಾರು ಮಂದಿ ವಯನಾಡು ಜಿಲ್ಲೆಯ ವಿವಿಧ ಭಾಗದ ೮ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದರಲ್ಲಿ ಮೇಪಾಡಿ ನಿರಾಶ್ರಿತರ ಕೇಂದ್ರಕ್ಕೆ ಸಿದ್ದಾಪುರದ ಯುವಕರ ತಂಡವೊAದು ಅಂದಾಜು ಎರಡು ಲಕ್ಷ ಮೊತ್ತದ ಅಕ್ಕಿ, ದಿನಸಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ನೀಡಿದ್ದಾರೆ.

-ಎ.ಎಸ್. ಮುಸ್ತಫಾ, ಸಿದ್ದಾಪುರ