ಮಡಿಕೇರಿ, ಆ. ೨: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಿಂದ ಗುರುವಾರ ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ನಡೆಯಿತು.
ತಾ. ೭ ರವರೆಗೆ ನಡೆಯುವ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಕಾರ್ಯಕ್ರಮವನ್ನು “ಕೊರತೆಗಳನ್ನು ಕೊನೆಗೊಳಿಸಿ: ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ” ಎಂಬ ಘೋಷವಾಕ್ಯದೊಂದಿಗೆ ಗಿಡಕ್ಕೆ ನೀರು ಹಾಕುವ ಮೂಲಕ ಜಿಲ್ಲಾ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಚಾಲನೆ ನೀಡಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಮಧುಸೂಧನ್ ಎ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಆಗಸ್ಟ್ ೧ ರಿಂದ ೭ ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಸ್ತನ್ಯಪಾನದ ಪ್ರಯೋಜನಗಳನ್ನು ತಿಳಿಸಲು ಇದರ ಉದ್ದೇಶವಾಗಿದ್ದು, ಜಿಲ್ಲೆಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆ-ತಾಲೂಕು ಆಸ್ಪತ್ರೆ, ಸ.ಆ.ಕೇಂದ್ರ, ಪ್ರಾ.ಆ.ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಮಾತನಾಡಿ, ಅಸ್ತಮಾ, ಆಹಾರ ಅಲರ್ಜಿ, ಮಧುಮೇಹ ಮತ್ತು ಅನೀಮಿಯಾ ಆಗುವ ಅಪಾಯಗಳು ಸ್ತನ್ಯಪಾನ ಸೇವನೆಯಿಂದಾಗಿ ಕಡಿಮೆ ಎಂದು ಹೇಳಿದರು.
ಪ್ರಸವದ ನಂತರ ಬರಬಹುದಾದ ಖಿನ್ನತೆ ಕಡಿಮೆಯಾಗುತ್ತದೆ. ಬಾಣಂತಿಯರು ಎದೆಹಾಲಿನ ಮಹತ್ವದ ಬಗ್ಗೆ ಅರಿತು ಮಗು ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸುವುದರಿಂದ ಮಗುವಿನ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಪುರುಷೋತ್ತಮ್ ಮಾತನಾಡಿ, ದೇಶದಲ್ಲಿ ಎನ್.ಎಫ್.ಹೆಚ್.ಎಸ್. ೪ರ ಪ್ರಕಾರ ಮಗು ಜನಿಸಿದ ಒಂದು ಗಂಟೆಯೊಳಗೆ ಎದೆಹಾಲು ಉಣಿಸುತ್ತಿರುವವರ ಸಂಖ್ಯೆ ಕೇವಲ ಶೇ. ೪೮ ಇದ್ದು, ಶೇ. ೫೨ ರಷ್ಟು ಮಕ್ಕಳು ಒಂದು ಗಂಟೆಯ ಒಳಗಿನ ಎದೆಹಾಲು ಸೇವನೆಯಿಂದ ವಂಚಿತರಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಎದೆಹಾಲು ಬಿಟ್ಟು ಇತರೆ ಬಾಟಲ್ ಹಾಲು ನೀಡುತ್ತಿರುವುದರಿಂದ ಮಕ್ಕಳಿಗೆ ಅಪೌಷ್ಟಿಕತೆ, ಸೋಂಕು ತಗಲುವ ಸಂಭವ ಹೆಚ್ಚು. ಎದೆಹಾಲನ್ನು ಮಗು ಜನಿಸಿದ ಒಂದು ಗಂಟೆಯೊಳಗೆ ಪ್ರಾರಂಭಿಸಿ ಕನಿಷ್ಟ ೬ ತಿಂಗಳವರೆಗೆ ನೀಡಬೇಕು ಹಾಗೂ ಗರಿಷ್ಠ ೨ ರಿಂದ ೩ ವರ್ಷಗಳವರೆಗೂ ನೀಡುವುದು ಉತ್ತಮ ಎಂದು ತಿಳಿಸಿದರು. ಜೇನುತುಪ್ಪ, ಸಿಹಿನೀರು, ಇತರೆ ಆಹಾರವನ್ನು ಮಗುವಿಗೆ ನೀಡುವುದರಿಂದ ಶಿಶುಗಳಿಗೆ ಸೋಂಕು ತಗಲುವ ಸಂಭವ ಹೆಚ್ಚು ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ. ರವಿಚಂದ್ರ ಮಾತನಾಡಿ, ಪ್ರತೀ ಪ್ರಾಣಿಗಳು ತಮ್ಮ ಮಕ್ಕಳಿಗೆ ಹುಟ್ಟಿದ ಕೂಡಲೇ ಎದೆಹಾಲನ್ನು ನೀಡುತ್ತವೆ. ಈಗಿನ ತಾಯಂದಿರು ಮಗು ಜನಿಸಿದ ತಕ್ಷಣ ಎದೆಹಾಲು ನೀಡುವುದು ಕಡಿಮೆ. ತಾಯಿಯ ಎದೆಹಾಲು ಅಮೃತ. ಇದರಲ್ಲಿ ಮಗುವಿಗೆ ಅವಶ್ಯಕವಾದ ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ ಇದ್ದು, ಮಗುವಿನ ಮೆದುಳಿನ ಬೆಳವಣಿಗೆಗೆ ಅತ್ಯಾವಶ್ಯಕ ಎಂದು ತಿಳಿಸಿದರು.
ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ದಿವ್ಯಾರಾಣಿ ಅವರು ಪಿಪಿಟಿ ಮುಖಾಂತರ ವಿವರಿಸುತ್ತಾ, ಮಗುವಿಗೆ ಜನ್ಮ ನೀಡುವುದು ಒಂದು ಸಂಕೀರ್ಣ ಕ್ರಿಯೆ. ತಾಯಿಯ ಎದೆಹಾಲು ವಿಶ್ವದ ಶ್ರೇಷ್ಠ ಆಹಾರ. ಇದು ಅಮೃತಕ್ಕೆ ಸಮಾನ. ಸಂಪೂರ್ಣ ಪೌಷ್ಟಿಕ ಸಮತೋಲನ ಆಹಾರ. ಭಾವನಾತ್ಮಕ ಸಂಬAಧದ ಬೆಸುಗೆ, ಸುಲಭವಾಗಿ ಜೀರ್ಣವಾಗುವ, ಸಂರಕ್ಷಿಸಿ ಇಡುವ ಅಗತ್ಯವಿಲ್ಲದ, ಖರ್ಚಿಲ್ಲದ, ಮಗುವಿಗೆ ರುಚಿಯಾದ ಸಿದ್ಧ ಆಹಾರ., ಅಮೃತ ಸಂಜೀವಿನಿ ಎಂದು ತಿಳಿಸಿದರು. ಅಲ್ಲದೇ ಎದೆಹಾಲಿನ ಮಹತ್ವ, ಎದೆಹಾಲು ಉಣಿಸುವ ಭಂಗಿಗಳು, ಹಾಲುಣಿಸುವಿಕೆಯ ಅಂತರ, ಸ್ತನಗಳ ಆರೈಕೆ, ಹಾಲುಕೊಡುವ ಅವಧಿ, ತಾಯಿಗೆ ಎದೆಹಾಲು ಉಣಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸವಿವರವಾಗಿ ಉಪನ್ಯಾಸ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್. ಪಾಲಾಕ್ಷ ಅವರು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಉದ್ದೇಶಗಳು, ಆಚರಣೆ, ಸೆಮಿನಾರ್ ಆಯೋಜಿಸಿ ಸಾಮಾನ್ಯ ಮಹಿಳೆಯರಿಗೆ ಸ್ತನ್ಯಪಾನದ ಉಪಯುಕ್ತತೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಸ್ತಿçÃರೋಗ ತಜ್ಞರಿಂದ ಉಪನ್ಯಾಸ ಮಾಡಿಸುವುದು. ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಸ್ತನ್ಯಪಾನವನ್ನು ಬೆಂಬಲಿಸುವ ಪ್ರತಿಜ್ಞೆಯನ್ನು ಟಿ.ಎನ್. ಪಾಲಾಕ್ಷ ಸಭೆಯಲ್ಲಿ ಬೋಧಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಸೋಮಶೇಖರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂದಿಗಳು, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಗರ್ಭಿಣಿಯರು, ಬಾಣಂತಿಯರು, ಸಾರ್ವಜನಿಕರು ಭಾಗವಹಿಸಿದ್ದರು. ಅಶ್ವಿನಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್. ಪಾಲಾಕ್ಷ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.