ಸೋಮವಾರಪೇಟೆ, ಆ. ೨: ಭಾರೀ ಮಳೆ, ಗಾಳಿಗೆ ಮರಗಳು ಬಿದ್ದು, ಮನೆ ಮಠಗಳಿಗೆ ಹಾನಿಯಾಗಿರುವುದು ಒಂದೆಡೆಯಾದರೆ, ನೂರಾರು ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು, ತಂತಿಗಳು ಮುರಿದು ಬಿದ್ದು ಹಾನಿ ಸಂಭವಿಸಿದೆ. ಇದನ್ನು ಸಮರ್ಪಕಗೊಳಿಸಲು ಸೆಸ್ಕ್ ಸಿಬ್ಬಂದಿಗಳು ಸಮರೋಪಾದಿ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ೨ ದಿನದಲ್ಲಿ ಎಲ್ಲೆಡೆ ಬೆಳಕು ನೀಡಲು ಶ್ರಮಿಸುತ್ತಿದೆ.
ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇನ್ನಿಲ್ಲದಂತೆ ಕಾಡಿತ್ತು. ಸೋಮವಾರಪೇಟೆ ವ್ಯಾಪ್ತಿಗೆ ವಿದ್ಯುತ್ ಕಲ್ಪಿಸುವ ಪ್ರಮುಖ ಮಾರ್ಗವಾದ ಕುಶಾಲನಗರ-ಯಡವನಾಡು ಲೈನ್ನಲ್ಲಿ ಆಗಾಗ್ಗೆ ಮರಗಳು ಬೀಳುತ್ತಿದ್ದುದರಿಂದ ದಿನಗಟ್ಟಲೆ ವಿದ್ಯುತ್ ಸ್ಥಗಿತವಾಗಿತ್ತು.
ಕುಶಾಲನಗರದಿಂದ ಸೋಮವಾರಪೇಟೆಗೆ ಬಂದಿರುವ ವಿದ್ಯುತ್ ಮಾರ್ಗವು ಯಡವನಾಡು ಅರಣ್ಯ ಪ್ರದೇಶದೊಳಗೆ ಹಾದುಹೋಗಿರುವುದು ಹಾಗೂ ಈ ಮಾರ್ಗದ ಸುಮಾರು ೧೫ ಕಿ.ಮೀ. ಮಾರ್ಗವು ತೋಟದೊಳಗೆ ಬಂದಿರುವುದರಿAದ ಅಲ್ಲಲ್ಲಿ ಮರಗಳು ಉರುಳಿ ವಿದ್ಯುತ್ ಸ್ಥಗಿತಗೊಳ್ಳುತ್ತಿತ್ತು.
ಕಂಡರಿಯದ ಭಾರೀ ಗಾಳಿಗೆ ನೂರಾರು ಮರಗಳು ತಂತಿಗಳ ಮೇಲೆ ಬಿದ್ದಿದ್ದರಿಂದ, ಕಂಬಗಳು ಧರಾಶಾಹಿಯಾಗಿದ್ದವು. ಒಂದು ಭಾಗದಲ್ಲಿ ಮರಗಳನ್ನು ತೆರವುಗೊಳಿಸುತ್ತಿದ್ದಂತೆ, ಮತ್ತೊಂದು ಭಾಗದಲ್ಲಿ ಮರಗಳು ಬೀಳುತ್ತಿದ್ದ ಹಿನ್ನೆಲೆ ಸೆಸ್ಕ್ ಸಿಬ್ಬಂದಿಗಳಿಗೆ ಇನ್ನಷ್ಟು ಕಠಿಣ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರೊಂದಿಗೆ ಗ್ರಾಮೀಣ ಭಾಗದಲ್ಲೂ ಅಸಂಖ್ಯಾತ ಮರಗಳು ಬಿದ್ದು, ಸಮಸ್ಯೆ ಸೃಷ್ಟಿಸಿತ್ತು. ಮುಖ್ಯ ಮಾರ್ಗದ ದುರಸ್ತಿಗೆ ಪ್ರಾಶಸ್ತö್ಯ ನೀಡಿದ ಸಿಬ್ಬಂದಿಗಳು, ಅನಿವಾರ್ಯವಾಗಿ ಗ್ರಾಮೀಣ ಭಾಗದ ಕಂಬಗಳ ದುರಸ್ತಿಗೆ ಮುಂದಾಗಲು ಸಾಧ್ಯವಾಗಿರಲಿಲ್ಲ.
ಕಳೆದ ಮೂರು ದಿನಗಳಿಂದ ಗಾಳಿಯ ರಭಸ ತಗ್ಗಿರುವ ಹಿನ್ನೆಲೆ ಸಿಬ್ಬಂದಿಗಳು ಸಮರೋಪಾದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಸುರಿದ ಮಳೆಗೆ ಸೋಮವಾರಪೇಟೆ ವಿದ್ಯುತ್ ಶಾಖಾ ವ್ಯಾಪ್ತಿಗೆ ಒಳಪಟ್ಟಂತೆ ಒಟ್ಟು ೪೫೮ ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಇದರಲ್ಲಿ ಸುಸ್ಥಿತಿಯಲ್ಲಿರುವ ಕಂಬಗಳನ್ನು ಹಾಗೆಯೇ ನಿಲ್ಲಿಸಲಾಗಿದ್ದು, ತುಂಡಾಗಿರುವ ಕಂಬಗಳನ್ನು ಬದಲಿಸಿ ನೂತನ ಕಂಬಗಳನ್ನು ಅಳವಡಿಸಲಾಗಿದೆ. ಈವರೆಗೆ ೪೧೩ ಕಂಬಗಳನ್ನು ಸರಿಪಡಿಸಲಾಗಿದೆ. ೪೫ ಕಂಬಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹಾನಗಲ್ಲು-ದುದ್ದುಗಲ್ಲು ಭಾಗದಲ್ಲಿ ಒಂದು ಟ್ರಾನ್ಸ್ಫಾರ್ಮರ್ ಹಾಳಾಗಿದ್ದು, ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಒಟ್ಟಾರೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ವಿದ್ಯುತ್ ಸಮಸ್ಯೆ ಬಹುಪಾಲು ನಿವಾರಣೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇನ್ನೂ ಅನೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಮರು ಕಲ್ಪಿಸಲು ಸಾಧ್ಯವಾಗಿಲ್ಲ. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಅನೇಕ ಮನೆಗಳಿಗೆ ಇನ್ನೂ ವಿದ್ಯುತ್ ತಲುಪಿಲ್ಲ. ಸೆಸ್ಕ್ ಸಿಬ್ಬಂದಿಗಳೊAದಿಗೆ ಸ್ಥಳೀಯರೂ ಸಹ ಕೈ ಜೋಡಿಸಿ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
‘ಇಲಾಖೆಯ ಸಿಬ್ಬಂದಿಗಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ನೂತನ ಕಂಬಗಳ ಅಳವಡಿಕೆ, ವಿದ್ಯುತ್ ತಂತಿ ಎಳೆಯುವುದು, ಮರಗಳ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಎರಡು ದಿನದಲ್ಲಿ ಎಲ್ಲೆಡೆಗೂ ವಿದ್ಯುತ್ ಸರಬರಾಜು ಮಾಡಲಾಗುವುದು’ ಎಂದು ಸೆಸ್ಕ್ನ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ತಿಳಿಸಿದ್ದಾರೆ.