ಸಿದ್ದಾಪುರ, ಆ. 1: ಒಂದೆಡೆ ಅತಿವೃಷ್ಟಿಯಿಂದ ಕಾಫಿ ಹಾಗೂ ಇನ್ನಿತರ ಫಸಲುಗಳು ನಾಶವಾಗುತ್ತಿದ್ದಂತೆ ಮತ್ತೊಂದೆಡೆ ಕಾಡಾನೆಗಳ ಉಪಟಳದಿಂದಾಗಿ ಬೆಳೆ ನಾಶಗೊಳ್ಳುತ್ತಿದ್ದು, ರೈತರು, ಕೃಷಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸಿದ್ದಾಪುರದ, ಗುಹ್ಯ, ಕರಡಿಗೋಡು, ಇಂಜಿಲಗೆರೆ ಸುತ್ತಮುತ್ತ ಪ್ರದೇಶಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಗುಹ್ಯ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸರಕಾರಿ ಶಾಲೆಯ ಬಳಿಯ ಕಾಫಿ ತೋಟಗಳಲ್ಲಿ ಸುತ್ತಾಡುತ್ತಾ ಫಸಲಿರುವ ಕಾಫಿ ಗಿಡಗಳನ್ನು ಹಾಗೂ ತೆಂಗಿನ ಮರಗಳನ್ನು, ಅಡಿಕೆ ಗಿಡಗಳನ್ನು ಧ್ವಂಸಗೊಳಿಸುತ್ತಿದೆ ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ಬೆಳೆಗಾರರಿಗೆ ನೆಮ್ಮದಿ ಇಲ್ಲದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ನಿರಂತರ ಮಳೆಯಿಂದಾಗಿ ಒಂದೆಡೆ ಕಾಫಿ ಉದುರುವಿಕೆ ಮತ್ತೊಂದೆಡೆ ಕಾಡಾನೆಗಳ ಉಪಟಳದಿಂದಾಗಿ ಬೆಳೆ ನಷ್ಟವಾಗುತ್ತಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಗುಹ್ಯ ಹಾಗೂ ಕರಡಿಗೋಡು ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಸುತ್ತಾಡುತ್ತಿದ್ದು, ಮರಿಯಾನೆಗಳು ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದೆ. ಇದರಿಂದಾಗಿ ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಭಯಭೀತರಾಗಿದ್ದಾರೆ. ಕೂಡಲೇ ಸರಕಾರವು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.