c

ಮಡಿಕೇರಿ, ಆ. ೨ ಕೊಡಗು ಜಿಲ್ಲೆ ಪ್ರಸ್ತುತ ಮುಂಗಾರುಮಳೆಯ ಆರ್ಭಟಕ್ಕೆ ನಲುಗುತ್ತಿದೆ. ಮಳೆ - ಗಾಳಿ, ಚಳಿಯ ನಡುವೆ ಕೊಡಗಿನ ವಿಶೇಷ ದಿನಗಳಲ್ಲಿ ಒಂದಾದ ಕಕ್ಕಡ (ಆಟಿ) ೧೮ರ ಸಂಭ್ರಮ ಆ. ೩ರ ಶನಿವಾರ ಇಂದು. ಮದ್ದುಪಾಯಸ, ಮದ್ದ್ಪುಟ್ಟ್, ನಾಟಿಕೋಳಿಯಂತಹ ಮಳೆಗಾಲದ ವಿಶೇಷ ಖಾದ್ಯದೊಂದಿಗೆ ಶೀತವಾತಾವರಣದ ನಡುವೆ ಮೈಯ್ಯನ್ನು ಒಂದಷ್ಟು ಬೆಚ್ಚಗಾಗಿಸಿಕೊಳ್ಳುವ ಉತ್ಸುಕತೆಯಲ್ಲಿ ಜನರಿದ್ದಾರೆ.

ಮನೆ ಮನೆಯಲ್ಲಿನ ಆಚರಣೆ ಒಂದಾದರೆ, ಇತ್ತೀಚಿನ ವರ್ಷಗಳಲ್ಲಿ ಇದು ಸಾರ್ವತ್ರಿಕವಾಗಿಯೂ ಆಚರಿಸಲ್ಪಡುತ್ತಿರುವುದು ಈಗಿನ ಬದಲಾವಣೆ. ಕೇವಲ ವಿಶೇಷ ಖಾದ್ಯಗಳ ಊಟೋಪಚಾರ ಮಾತ್ರವಲ್ಲ ಇದರೊಂದಿಗೆ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ವಿಶೇಷವಾಗಿ ಪೊನ್ನಂಪೇಟೆಯಲ್ಲಿ ಕೊಡವ ಹಿತರಕ್ಷಣಾ ಬಳಗ ಕಿಗ್ಗಟ್ಟ್ನಾಡ್, ಪೊನ್ನಂಪೇಟೆ ಇವರ ವತಿಯಿಂದ ಪಂಜಿನ ಮೆರವಣಿಗೆ ಸೇರಿದಂತೆ, ವೈವಿಧ್ಯಮಯ ಕಾರ್ಯಕ್ರಮಗಳು ಸೇರಿದಂತೆ ಜಿಲ್ಲೆಯ ಇನ್ನಿತರ ಕಡೆಗಳಲ್ಲೂ ಸಂಭ್ರಮಾಚರಣೆಯ ಕಾರ್ಯಕ್ರಮಗಳು ಜರುಗಲಿವೆ. ಈ ದಿನದ ವಿಶೇಷತೆಗೆ ಅಗತ್ಯವಾಗಿ ಬೇಕಾದ ಮದ್ದುಸೊಪ್ಪಿನ ವ್ಯಾಪಾರವೂ ಬಿರುಸಿನಿಂದ ಸಾಗಿದ್ದು, ಜನರು ಈ ವಿಶೇಷ ಸೊಪ್ಪನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಮದ್ದು ಪಾಯಸದ ಘಮನ ಇಂದು (ತಾ.೩) ಜಿಲ್ಲೆಯ ವಿಶೇಷತೆ.