ಮಡಿಕೇರಿ, ಆ. ೨: ಮಡಿಕೇರಿ ಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಲೆಕ್ಟಿçಕ್ ಬಸ್ ಇಂದು ಬೆಳಿಗ್ಗೆ ಸುಂಟಿಕೊಪ್ಪದ ಕೊಡಗರಹಳ್ಳಿ ಬಳಿ ರಸ್ತೆ ಬದಿಯ ತೋಟಕ್ಕೆ ಮಗುಚಿ ಅವಘಡ ಸಂಭವಿಸಿದೆ. ಎದುರಿನಿಂದ ಕಾರ್ಮಿಕರನ್ನು ಕರೆತರುತ್ತಿದ್ದ ಜೀಪೊಂದು ಬಸ್ಸೊಂದನ್ನು ಹಿಂದಿಕ್ಕಲು ಮುಂದಾದ ಸಂದರ್ಭ ಜೀಪ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದ ವೇಳೆ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಟಕ್ಕೆ ಮಗುಚಿದೆ ಎನ್ನಲಾಗಿದೆ.

ಬೆಳಿಗ್ಗೆ ೮ ಗಂಟೆಗೆ ಮಡಿಕೇರಿ ಯಿಂದ ತೆರಳುತ್ತಿದ್ದ ಬಸ್‌ನಲ್ಲಿ ೧೫ ಮಂದಿ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯ ದಿಂದ ಪಾರಾಗಿದ್ದಾರೆ. ಘಟನೆಯಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಎಡಭಾಗಕ್ಕೆ ಮಗುಚಿಕೊಂಡಿದ್ದರಿAದ ಬಾಗಿಲು ತೆರೆಯಲು ಅಸಾಧ್ಯವಾಗಿತ್ತು. ಈ ಸಂದರ್ಭ ಪ್ರಯಾಣಿಕರನ್ನು ತುರ್ತು ಬಾಗಿಲು ಹಾಗೂ ಚಾಲಕನ ಬಾಗಿಲಿನ ಮೂಲಕ ಹೊರತರಲಾಗಿದೆ.

ಬಳಿಕ ಕ್ರೇನ್‌ನ ಸಹಾಯದಿಂದ ಬಸ್ ಅನ್ನು ಮೇಲಕ್ಕೆ ಎತ್ತಲಾಗಿದೆ. ಸಾರಿಗೆ ಇಲಾಖೆಗೆ ಈ ಸಂದರ್ಭ ಸಾರ್ವಜನಿಕರೂ ನೆರವಾಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಘಟಕ ವ್ಯವಸ್ಥಾಪಕ ಮೆಹಬೂಬ್ ಆಲಿ, ಪುತ್ತೂರು ವಿಭಾಗೀಯ ಕಚೇರಿಯ ಅಧಿಕಾರಿಗಳಾದ ಅಮರ್ ಲಿಂಗಯ್ಯ ಪೂಜಾರಿ, ಜಯಶಾಂತ್ ಮತ್ತಿತರರು ಭೇಟಿ ನೀಡಿ ಪರಿಸ್ಥಿತಿ ಸರಿಪಡಿಸಿದರು.

ಈ ಬಗ್ಗೆ ಕೆಎಸ್‌ಆರ್‌ಟಿಸಿ ನೀಡಿದ ದೂರಿನಂತೆ ಜೀಪ್‌ಚಾಲಕನ ವಿರುದ್ಧ ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿದೆ. ಪವಾಡಸದೃಶ ರೀತಿಯಲ್ಲಿ ಹೆಚ್ಚಿನ ದುರಂತ ಸಂಭವಿಸಲಿಲ್ಲ. ಒಂದು ವೇಳೆ ಮುಖಾಮುಖಿ

(ಮೊದಲ ಪುಟದಿಂದ) ಡಿಕ್ಕಿಯಾಗಿದ್ದಲ್ಲಿ ಭಾರೀ ಅನಾಹುತ ನಡೆದು ಹೋಗುತ್ತಿತ್ತು ಎಂದು ಹೇಳಲಾಗಿದೆ. ಈ ರಸ್ತೆಯಲ್ಲಿ ಕೆಸರು ಹರಡಿ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದರಿಂದ ಕುಶಾಲನಗರ ಅಗ್ನಿಶಾಮಕ ದಳದ ಸಿಬ್ಬಂದಿ ಹೆದ್ದಾರಿಯಲ್ಲಿ ನೀರು ಹಾಯಿಸಿ ರಸ್ತೆಯನ್ನು ಕೆಸರುಮುಕ್ತ ಮಾಡಲು ಸಹಕರಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.