ಮಡಿಕೇರಿ, ಆ. ೨: ಒಕ್ಕಲಿಗರ ಯುವ ವೇದಿಕೆ ದಕ್ಷಿಣ ಕೊಡಗು ಇವರ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಮೂರನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ವೀರಾಜಪೇಟೆ ಹೊರವಲಯದ ಕೋಟೆ ಕೊಪ್ಪದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಮತ್ತು ಕೆಂಪೇಗೌಡ ಆಸ್ಪತ್ರೆಯ ಆಡಳಿತ ಮಂಡಳಿಯ ಅಧ್ಯಕ್ಷ ಹರಪಳ್ಳಿ ರವೀಂದ್ರ ಅವರು ಉದ್ಘಾಟನೆ ಮಾಡಿದರು, ಅಧ್ಯಕ್ಷತೆಯನ್ನು ವೀರಾಜಪೇಟೆ ಮತ್ತು ಪೊನ್ನಂಪೇಟೆ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ವಿ.ಪಿ. ಡಾಲು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎನ್. ಚೆಂಗಪ್ಪ, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಸ್ಥಳೀಯ ನಿವಾಸಿ ನಿವೃತ್ತ ಪೊಲೀಸ್ ಅಧಿಕಾರಿ ವಿ.ಸಿ. ಗಣೇಶ್, ವಿ.ಎಂ. ಚಂದ್ರು, ಸ್ಥಳೀಯ ಕಾಫಿ ಬೆಳೆಗಾರ ವಿ.ಕೆ. ಲಿಂಗಪ್ಪ, ವಿ.ಬಿ. ಅಪ್ಪಣ್ಣ, ವಿ. ವಸಂತ, ವಿ.ಹೆಚ್. ಲಕ್ಷ್ಮಯ್ಯ, ನಿವೃತ್ತ ಸರ್ಕಾರಿ ಬಸ್ ಚಾಲಕ ವಿ.ಕೆ. ರಾಜಕಾಳಪ್ಪ ಆಗಮಿಸಿದ್ದರು.

ವೇದಿಕೆಯಲ್ಲಿ ವೆಂಕಟೇಶ್ವರ ದೇವಾಲಯದ ಅಧ್ಯಕ್ಷ ವಿ.ಎಲ್. ಸುರೇಶ್, ಯುವ ವೇದಿಕೆಯ ಕೆ.ಪಿ. ಅಜಿತ್, ವಿ.ಟಿ. ಶ್ರೇಯಸ್, ವಿ.ಎಸ್. ಕಿರಣ್ ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಮಡಿಕೆ ಒಡಿಯುವುದು, ಮಹಿಳೆಯರಿಗೆ ಥ್ರೋಬಾಲ್, ಓಟ, ಹಗ್ಗಜಗ್ಗಾಟ, ಮಕ್ಕಳಿಗೆ ಪಾಸಿಂಗ್ ದಿ ಬಾಲ್, ಓಟದ ಸ್ಪರ್ಧೆ ನಡೆಯಿತು.

ಹರಪಳ್ಳಿ ರವೀಂದ್ರ ಅವರು ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಈ ರೀತಿಯ ಕ್ರೀಡಾಕೂಟ ನಡೆಸುವುದು ಸಂತೋಷ ತಂದಿದೆ. ಜನಾಂಗದ ಸದಸ್ಯರು ಆರೋಗ್ಯದಲ್ಲಿ ಏನಾದರೂ ತೊಂದರೆ ಆದರೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಕನಿಷ್ಟ ಇಪ್ಪತ್ತೈದು ಸಾವಿರ ರೂಪಾಯಿವರೆಗೆ ಬಿಲ್‌ನಲ್ಲಿ ರಿಯಾಯಿತಿ ಅಲ್ಲದೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಸಹಕರಿಸುತ್ತೇನೆ ಎಂದರು.

ಜಿಲ್ಲಾಧ್ಯಕ್ಷ ಚೆಂಗಪ್ಪ ಮಾತನಾಡಿ, ನಮ್ಮ ಜನಾಂಗದ ಸದಸ್ಯರು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ಗದ್ದೆ ಹಾಗೂ ತೋಟವನ್ನು ಮಾರಾಟ ಮಾಡಬಾರದು ಎಂದು ಕಿವಿಮಾತು ಹೇಳಿದರು. ಗಿರೀಶ್ ಮಲ್ಲಪ್ಪ ಮಾತನಾಡಿ, ನಮ್ಮ ಜನಾಂಗದ ಸದಸ್ಯರು ಮುಖ್ಯ ವಾಹಿನಿಗೆ ಬರಬೇಕು ಎಂದರು. ಕ್ರೀಡಾಕೂಟದ ಅಧ್ಯಕ್ಷ ವಿ.ಪಿ. ಡಾಲು ಮಾತನಾಡಿ, ನಮ್ಮ ಜನಾಂಗದ ಸದಸ್ಯರನ್ನು ಒಟ್ಟುಗೂಡಿಸಿ ವರ್ಷಕ್ಕೆ ಒಮ್ಮೆಯಾದರೂ ಎಲ್ಲಾ ಒಟ್ಟಿಗೆ ಸೇರಿಸಲು ಈ ಕ್ರೀಡಾಕೂಟ ಪ್ರಯೋಜನಕಾರಿ ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಎಲ್ಲರಿಗೂ ಬಹುಮಾನ ನೀಡಲಾಯಿತು. ಗಣ್ಯರಿಗೆ ಮತ್ತು ಗ್ರಾಮದ ಹಿರಿಯ ಸದಸ್ಯರಿಗೆ, ಪ್ರತಿಭಾನ್ವಿತ ಇಬ್ಬರು ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಸನ್ಮಾನ ಮಾಡಲಾಯಿತು.