ಮಡಿಕೇರಿ, ಆ. ೨: ಜಿಲ್ಲೆಯಲ್ಲಿ ವಿಪರೀತ ಗಾಳಿ - ಮಳೆಯಿಂದಾಗಿ ಪ್ರಮುಖ ಬೆಳೆಯಾಗಿರುವ ಕಾಫಿ ಸೇರಿದಂತೆ ಅಡಿಕೆ, ಕರಿಮೆಣಸು ಫಸಲು ತೀರಾ ಹಾನಿಯಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆತಂಕ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಸಮಿತಿ ಪದಾಧಿಕಾರಿಗಳು ಗೋಣಿಕೊಪ್ಪಲು ಅರುವತೊಕ್ಕಲುವಿನಲ್ಲಿರುವ ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ. ಶ್ರೀದೇವಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ಕಾಫಿ ನಷ್ಟದ ಬಗ್ಗೆ ವಿವರಿಸಿದರು. ಕಾಫಿಗೆ ಕೊಳೆರೋಗ ಸೇರಿದಂತೆ ಉದುರುವಿಕೆ ತೀರಾ ಹೆಚ್ಚಾಗಿದ್ದು, ಕೈಗೆ ಬರುತ್ತಿರುವ ಫಸಲು ಇಲ್ಲದಂತಾಗುತ್ತಿದೆ. ಈ ಬಗ್ಗೆ ಕಾಫಿ ಮಂಡಳಿಯವರು ಬೆಳೆಗಾರರ ತೋಟಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರೆ ಮಾತ್ರ ನಷ್ಟದ ಅಂದಾಜು ತಿಳಿಯಲಿದೆ.
ತಡಮಾಡಿದಲ್ಲಿ ಉದುರಿದ ಫಸಲು ಮಣ್ಣಿನಡಿ ಸೇರಿ ಕೊಳೆತು ಹೋಗುತ್ತದೆ. ಇದರಿಂದ ನಷ್ಟದ ಅಂದಾಜು ತಿಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮೀಕ್ಷೆಗೆ ತಕ್ಷಣ ಕ್ರಮಕೈಗೊಂಡು ಸಂಬAಧಿಸಿದ ಇತರ ಇಲಾಖೆಯ ಜತೆಯಲ್ಲೂ ವ್ಯವಹರಿಸಿ ಗರಿಷ್ಟ ಪ್ರಮಾಣದ ಪರಿಹಾರವನ್ನು ಒದಗಿಸಬೇಕೆಂದು ಸಮಿತಿಯ ಪ್ರಮುಖರು ಆಗ್ರಹಿಸಿದರು. ಸಮಿತಿ ಅಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ, ಬಿ.ಎಸ್. ಕಾಶಿಕುಶಾಲಪ್ಪ, ಬೋಸ್‌ವಿಶ್ವನಾಥ್, ಸತೀಶ್ ದೇವಯ್ಯ, ರಾಜಾನರೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.