ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಕಿರುಗೂರು, ಮತ್ತೂರು ಕೋಟೂರು ಗ್ರಾಮಗಳ ಕಾಫಿತೋಟಗಳಲ್ಲಿ ೬ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಆತಂಕ ಸೃಷ್ಟಿಸಿದೆ. ಕಾಡಾನೆ ಹಿಂಡು, ಮತ್ತೂರು ಗ್ರಾಮದ ಮಕ್ಕಿಕಾಡು, ಕಾರೇಕಾಡು ,ಕುಟ್ಟೀಚಾತ ದೇವರ ಕಾಡು ಹಾಗೂ ಪೊಕ್ಕಳಿಚಂಡ ಕುಟುಂಬಸ್ಥರ ಕಾಡಿನಲ್ಲಿ ಸೇರಿಕೊಂಡು ರೈತರು ಬೆಳೆದ ಬೆಳೆಗಳನ್ನು ನಾಶ ಗೊಳಿಸುತ್ತಿದೆ.
ಕಿರುಗೂರು, ಮತ್ತೂರು, ಕೋಟೂರು ಗ್ರಾಮಗಳ ಕಾಫಿತೋಟಗಳಲ್ಲಿ ಕಳೆದ ೧೯ ದಿನಗಳಿಂದ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡು ಹಾಡಹಗಲೇ ಉಪಟಳ ನಡೆಸಿ ಕಾಫಿ, ಅಡಿಕೆ,ತೆಂಗು, ಬಾಳೆ ಹಾಗೂ ಇನ್ನಿತರ ಬೆಳೆಗಳನ್ನು ನಾಶಪಡಿಸಿದೆ. ಈ ವರ್ಷದ ಬಾರಿ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗುತ್ತಿದ್ದು, ಜೊತೆಗೆ ಕಾಡಾನೆಗಳಿಂದಲೂ ರೈತರಿಗೆ ಸಂಕಷ್ಟ ಎದುರಾಗುತ್ತಿದೆ.
ಕಾಡಾನೆಗಳ ಹಿಂಡು ಕಾಫಿತೋಟಗಳಲ್ಲಿ ಬೀಡುಬಿಟ್ಟಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ, ಯಾವುದೇ ರೀತಿಯಲ್ಲಿ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲವೆಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.
ಕಿರುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳ ಉಪಟಳ ಹೆಚ್ಚಾಗುತ್ತಿದೆ. ಕಳೆದ ವಾರ ಕಿರುಗೂರು ಗ್ರಾಮದ ವ್ಯಕ್ತಿ ಒಬ್ಬರ ಮೇಲೆ ಆನೆ ದಾಳಿ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕಾಗಮಿಸುವ ಇಲಾಖೆಯವರು ಪಟಾಕಿ ಸಿಡಿಸಿ ಆನೆಗಳನ್ನು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಓಡಿಸುತ್ತಿದ್ದಾರೆ. ಆನೆ ತುಳಿತಕ್ಕೆ ಒಳಗಾದವರಿಗೆ ಒಂದು ಬೆಲೆ ನಿಗದಿ ಮಾಡಿದರೆ ಸಾಲದು ಎಂದರು. ಕೂಡಲೇ ಆನೆ ಕಾರ್ಯಾಚರಣೆ ನಡೆಸಿ ಈ ಸಮಸ್ಯೆ ಸರಿಪಡಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ಕಾಕೇರ ರವಿ ಅವರು ಮಾತನಾಡಿ ಕಳೆದ ಎಂಟು ಹತ್ತು ವರ್ಷಗಳಿಂದ ಮತ್ತೂರು ಗ್ರಾಮದಲ್ಲಿ ಆನೆಗಳ ಹಾವಳಿ ನಿರಂತರವಾಗಿದೆ. ನಿನ್ನೆ ದಿನ ರುಕ್ಮಿಣಿ ಹಾಗೂ ಚೆಪ್ಪುಡಿರ ನಟೇಶ್ ಅವರ ತೋಟದಲ್ಲಿ ೫೦ ರಿಂದ ೬೦ ಕಾಫಿ ಗಿಡಗಳನ್ನು ನಾಶ ಮಾಡಿದೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದಾಗ ಸಂಜೆಯ ಸಮಯದಲ್ಲಿ ಸ್ಥಳಕ್ಕಾಗಮಿಸುವ ಸಿಬ್ಬಂದಿಗಳು ಕತ್ತಲಾಯಿತೆಂದು ಹಿಂದಿರುಗುತ್ತಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದಲ್ಲಿ ಕೋಟೂರು, ಮತ್ತೂರು, ಕಿರುಗೂರು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.
ಈ ಸಂದರ್ಭ ಕೊರಕುಟ್ಟೀರ ಉತ್ತಪ್ಪ, ಪೊಕ್ಕಳಿಚಂಡ ಸುಭಾ ಗಣಪತಿ , ದೊರೆಮಣಿ, ಕಾರ್ಯಪ್ಪ, ಬೋಪಣ್ಣ, ಪಧಾರ್ಥಿ ಸುರೇಶ, ಹರೀಶ್, ಆಲೆಮಾಡ ಜಗತ್, ಪುತ್ತಮನೆ ಶರಣು ಇನ್ನಿತರರು ಇದ್ದರು.