ಗೋಣಿಕೊಪ್ಪಲು, ಆ. ೨ : ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೊಡಗಿನ ಹಲವೆಡೆ ಅಪಾರ ನಷ್ಟ ಸಂಭವಿಸಿದ್ದು, ಇವುಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೊಡಗಿಗೆ ಆಗಮಿಸಿದ ಸಂದರ್ಭ ಗಡಿಭಾಗವಾದ ಆನೆಚೌಕೂರು ಬಳಿಯಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು ಸೇರಿದಂತೆ ಕಾರ್ಯಕರ್ತರು ಹಾಗೂ ಜಿಲ್ಲೆಯ ಅಧಿಕಾರಿಗಳು ಸ್ವಾಗತಕೋರಿ ಬರಮಾಡಿಕೊಂಡರು.
ತಿತಿಮತಿ ಬಳಿಯ ಆನೆಚೌಕೂರು ಬಳಿ ಮಧ್ಯಾಹ್ನದ ವೇಳೆ ಶಾಸಕ ಎ.ಎಸ್.ಪೊನ್ನಣ್ಣನವರ ಜೊತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದರು. ಈ ವೇಳೆ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷÀ ತೀತಿರ ಧರ್ಮಜ ಉತ್ತಪ್ಪ ಮುಖ್ಯಮಂತ್ರಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ವೆಂಕಟರಾಜ್ ಹಾಗೂ ಕೊಡಗು ಉಸ್ತುವಾರಿ ಕಾರ್ಯದರ್ಶಿ ಎಂ.ವಿ. ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಜಿಲ್ಲಾಡಳಿತದ ಪರವಾಗಿ ಹೂಗುಚ್ಚ ನೀಡಿ ಜಿಲ್ಲೆಗೆ ಬರಮಾಡಿಕೊಂಡರು.
ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ಗೌಡ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ,ನಾಪೊಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ, ಕೆಪಿಸಿಸಿಯ ಟಿ.ಪಿ.ರಮೇಶ್, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಪಿ.ಆರ್.ಪಂಕಜ, ಹೆಚ್.ಬಿ.ಗಣೇಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ವಿ.ಪಿ.ಶಶಿಧರ್, ಅಬ್ದುಲ್ ರೆಹಮಾನ್ ಬಾಪು, ಯಾಕುಬ್ ಮುಂತಾದ ಗಣ್ಯರು ಹೂ ಗುಚ್ಚ ನೀಡಿದರು.
ಮಳೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕರ್ತರ ಹೂ ಗುಚ್ಚ ಸ್ವೀಕರಿಸಿ ಮಳೆ ಹಾನಿ ಪ್ರದೇಶವಾದ ಶ್ರೀಮಂಗಲ-ಕುಟ್ಟ ರಾಜ್ಯ ಹೆದ್ದಾರಿಯನ್ನು ವೀಕ್ಷಣೆ ಮಾಡುವ ಸಲುವಾಗಿ ತೆರಳಿದರು. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ತಿತಿಮತಿ, ದೇವರಪುರ, ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ ಟಿ.ಶೆಟ್ಟಿಗೇರಿ ಮುಖ್ಯ ರಸ್ತೆಯಲ್ಲಿ ಜೀರೊ ಟ್ರಾಫಿಕ್ ಮಾಡಲಾಗಿತ್ತು. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಖುದ್ದಾಗಿ ಆಗಮಿಸಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಉಸ್ತುವಾರಿ ಸಚಿವ ಬೋಸರಾಜ್, ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್, ತಾಲೂಕು ಪಂಚಾಯಿತಿ ಇಒ ಕೆ.ಸಿ.ಅಪ್ಪಣ್ಣ, ಡಿವೈಎಸ್ಪಿ ಮೋಹನ್ ಕುಮಾರ್, ಎಸಿಎಫ್ ಗೋಪಾಲ್, ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುದೋಳ್, ಮಂಜಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.