ಗೋಣಿಕೊಪ್ಪಲು, ಆ. 1: ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಅಶ್ವತ್ಥನಾರಾಯಣ ದಕ್ಷಿಣ ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು.

ಮಳೆಹಾನಿ ಪ್ರದೇಶಗಳಾದ ಕುಟ್ಟ, ಶ್ರೀಮಂಗಲ ರಸ್ತೆ, ಕಾಯಿಮಾನಿ ಬಳಿ ತೀವ್ರ ಹಾನಿ ಆಗಿರುವ ಕಾಫಿ ತೋಟ, ಮಂಚಳ್ಳಿ ಬಳಿ ಮಳೆಗೆ ಕುಸಿದಿರುವ ಮನೆ ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳಿ ಪರಿಶೀಲಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ, ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಜಿ ಉಪಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದರು. ಕುಟ್ಟ, ಶ್ರೀಮಂಗಲ ರಸ್ತೆ ವೀಕ್ಷಣೆ ನಡೆಸಿದ ಡಾ. ಅಶ್ವತ್ಥನಾರಾಯಣ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಎಇಇ ಲಿಂಗರಾಜ್ ಅವರಿಂದ ಅಗತ್ಯ ಮಾಹಿತಿ ಪಡೆದರು.

ಸ್ಥಳದಲ್ಲಿದ್ದ ನಾಗರಿಕರು ರಸ್ತೆ ಸಮಸ್ಯೆಯಿಂದ ಬಸ್ ಸಂಚಾರ ನಿಂತು ಹೋಗಿದೆ. ಇದರಿಂದ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಈ ಭಾಗದಲ್ಲಿ ತಾತ್ಕಾಲಿಕವಾಗಿ ಓಡಾಡಲು ವಾಹನದ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳೊಂದಿಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು.

ಮಂಚಳ್ಳಿ ಬಳಿ ಭಾರಿ ಮಳೆಗೆ ಕುಸಿದಿರುವ ಮನೆಯನ್ನು ವೀಕ್ಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಶ್ರೀಮಂಗಲದ ಕಂದಾಯ ಅಧಿಕಾರಿಗಳಿಗೆ ಪರಿಹಾರದ ಬಗ್ಗೆ ಶಾಸಕ ಅಶ್ವತ್ಥನಾರಾಯಣ ವಿವರ ಕೇಳಿದರು. ಈಗಾಗಲೇ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೂ. 3.5 ಲಕ್ಷ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರಂಭದಲ್ಲಿ ರೂ. 1.25 ಲಕ್ಷವನ್ನು ನೀಡಲಾಗುತ್ತಿದೆ ಎಂದು ಕಂದಾಯ ಅಧಿಕಾರಿಗಳು ವಿವರಿಸಿದರು. ತೀವ್ರ ರೀತಿಯಲ್ಲಿ ಹಾನಿಯಾಗಿರುವುದರಿಂದ ಹೆಚ್ಚಿನ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಮಳೆಯಿಂದ ತೀವ್ರ ಹಾನಿಗೊಳಗಾದ ನಾಥಂಗಲ್ ಗ್ರಾಮದ ರವಿ ಎಂಬವರ ಮನೆ, ಕುಮಟೂರಿನ ಕಳ್ಳಂಗಡ ಕಿಶನ್, ಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು.

ಸಮೀಪದ ಕಾಯಿಮಾನಿ ಬಳಿ ಇರುವ ಕಾಫಿ ತೋಟಕ್ಕೆ ಭೇಟಿ ನೀಡಿ ತೀವ್ರ ಮಳೆಯಿಂದ ಕಾಫಿ ಗಿಡಗಳಿಗೆ ಆಗಿರುವ ಸಮಸ್ಯೆಗಳನ್ನು ವೀಕ್ಷಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚೋಡುಮಾಡ ಶರೀನ್ ಸುಬ್ಬಯ್ಯ, ಅಶ್ವತ್ಥನಾರಾಯಣ ಇವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರ ನೀಡಿದರು.

ಮಳೆಹಾನಿ ವೀಕ್ಷಣೆಗೆ ಆಗಮಿಸಿದ ಡಾ. ಅಶ್ವತ್ಥನಾರಾಯಣ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ, ದ.ಕೊಡಗಿನ ಮಳೆ ಹಾನಿಯಿಂದ ಆದ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದೇನೆ. ಪೂಚೆಕಲ್ಲು ಬಳಿ ನಾಗರಿಕರಿಗೆ ಅನುಕೂಲಕ್ಕಾಗಿ ಶಾಶ್ವತವಾದ ಸೇತುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಮಳೆಯಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಇಲ್ಲಿಯ ಜನರಿಗೆ ಶಾಶ್ವತ ಪರಿಹಾರ ಸಿಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.

ಶ್ರೀಮAಗಲ-ಕುಟ್ಟ ರಾಜ್ಯ ಹೆದ್ದಾರಿಯಿಂದ ರಾಷ್ಟಿçÃಯ ಹೆದ್ದಾರಿಯಾಗಲಿದೆ. ಕೇಂದ್ರ ಸರ್ಕಾರದ ಯೋಜನೆಯಾದ ಭಾರತ್ ಮಾಲ 2ರಲ್ಲಿ ಈ ರಸ್ತೆ ಅಭಿವೃದ್ಧಿಯಾಗಲಿದ್ದು ಈಗಾಗಲೇ ಡಿಪಿಆರ್ ಮುಗಿದಿದೆ. ಹಲವು ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗುತ್ತಿದ್ದಂತೆಯೆ ರಸ್ತೆ ಅಭಿವೃದ್ಧಿ ಕೆಲಸ ಆರಂಭವಾಗಲಿದೆ ಎಂದು ಅಶ್ವತ್ಥ ಹೇಳಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕೊಡಗಿಗೆ ಆದ್ಯತೆ ಮೇರೆಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಪ್ರಧಾನ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ, ತಾಲೂಕು ಅಧ್ಯಕ್ಷ ಸುವಿನ್ ಗಣಪತಿ, ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ವೀರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಮಂಜು ಗಣಪತಿ, ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ, ಮಾಪಂಗಡ ಯಮುನಾ ಚಂಗಪ್ಪ, ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಹೇಮಾ, ಉಪಾಧ್ಯಕ್ಷೆ ತೀರ್ಥ ಮಂಜುನಾಥ್, ಸದಸ್ಯರಾದ ದಿವ್ಯ ಮನೋಜ್, ಜನಾರ್ಧನ, ರವಿ ನಾಥಂಗಲ್, ಪಕ್ಷದ ಮುಖಂಡರಾದ ಚೋಡುಮಾಡ ದಿನೇಶ್, ಕಾಕೇರ ದಿನೇಶ್, ಗುಡ್ಡಮಾಡ ಅಪ್ಪಿ, ಶಕ್ತಿ ಕೇಂದ್ರದ ಪ್ರಮುಖ್ ತೀತಿರ ರಾಜ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. -ಹೆಚ್.ಕೆ. ಜಗದೀಶ್