ಮಡಿಕೇರಿ, ಆ. 1: ಹಿಂದೂ ಎಕನಾಮಿಕ್ ಫೋರಂ ಕೊಡಗು ಜಿಲ್ಲಾ ಘಟಕ ಹಾಗೂ ಲಘು ಉದ್ಯೋಗ ಭಾರತಿ ಮೈಸೂರು ವಿಭಾಗದ ವತಿಯಿಂದ ತಾ. 3 ರಂದು (ನಾಳೆ) ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಸ್ವ-ಉದ್ಯೋಗದಲ್ಲಿ ವಿಪುಲ ಅವಕಾಶಗಳ ಕುರಿತ ಮಾರ್ಗದರ್ಶನ ಕಾರ್ಯಗಾರ ನಡೆಯಲಿದೆ ಎಂದು ಫೋರಂ ಪ್ರಮುಖರು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂ ಕಾರ್ಯಾಧ್ಯಕ್ಷ ಟಿ.ಕೆ. ಸುಧೀರ್, ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ, ಸಂಬಾರ ಪದಾರ್ಥ ಮತ್ತು ಸುಗಂದ ದ್ರವ್ಯ ತಂತ್ರಜ್ಞಾನದ ನುರಿತ ಕೇಂದ್ರಿಯ ಆಹಾರ ತಾಂತ್ರಿಕ ಸಂಶೋಧನಾಲಯದ ವಿಜ್ಞಾನಿ ಡಾ. ಪುಷ್ಪಾ ಮೂರ್ತಿ, ಹಣ್ಣು, ಹಂಪಲು, ತರಕಾರಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್. ನೇಗಿ, ಕೇಂದ್ರ ಸರಕಾರದ ಎಂ.ಎಸ್.ಎA.ಇ. ವಿಭಾಗದ ಜಂಟಿ ನಿರ್ದೇಶಕ ಕೆ. ದೇವರಾಜು, ಕೊಡಗು ವಿಶ್ವವಿದ್ಯಾನಿಲಯ ಕುಲಪತಿ ಡಾ. ಅಶೋಕ್ ಅಲೂರ್, ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಕಾರ್ಯನಿರ್ವಹಣಾಧಿಕಾರಿ ಹೆಚ್.ಆರ್. ರಾಜಪ್ಪ, ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಶುಭಾ ರಾವ್ ಶ್ರೀಪತಿ ಪಾಲ್ಗೊಂಡು ಉದ್ಯಮ ಮಾರ್ಗದರ್ಶನದೊಂದಿಗೆ ದೊರೆಯುವ ಆರ್ಥಿಕ ಸವಲತ್ತು ಕುರಿತು ಮಾಹಿತಿ ಒದಗಿಸಲಿದ್ದಾರೆ ಎಂದು ವಿವರಿಸಿದರು.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಭಾಗವಹಿಸಲಿದ್ದು, ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಸುಧೀರ್ ತಿಳಿಸಿದರು.

ಫೋರಂ ಅಧ್ಯಕ್ಷ ಡಾ. ಶಾಂ ಅಪ್ಪಣ್ಣ ಮಾತನಾಡಿ, ಹಿಂದೂ ಉದ್ಯಮಿ ಹಾಗೂ ಸ್ವ-ಉದ್ಯೋಗ ನಡೆಸುವ ಇಂಗಿತ ಇರುವವರನ್ನು ಒಗ್ಗೂಡಿಸಿ ಉದ್ಯಮಶೀಲರನ್ನಾಗಿ ಮಾಡುವ ಗುರಿಯೊಂದಿಗೆ ಸಂಸ್ಥೆ ಮುನ್ನಡೆಯುತ್ತಿದ್ದು, ಅಂತರರಾಷ್ಟಿçÃಯ ಮಟ್ಟದಲ್ಲಿ ಮಾನ್ಯತೆ ಗಳಿಸಿಕೊಂಡಿದೆ. ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ಉದ್ದೇಶ ಈ ಕಾರ್ಯಾಗಾರದ ಮೂಲಕ ಹೊಂದಲಾಗಿದೆ. ಒಂದೇ ವೇದಿಕೆಯಲ್ಲಿ ಮಾರ್ಗದರ್ಶನದೊಂದಿಗೆ ಚಿಂತನೆಗಳಿಗೆ ಪೂರಕ ತರಬೇತಿ, ಮಾರುಕಟ್ಟೆ ವೃದ್ಧಿ, ಉತ್ಪಾದನೆಯ ಬಗ್ಗೆ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೊಡಿಸಲಾಗುವುದು. ಇದರಿಂದ ಉದ್ಯಮದ ಜ್ಞಾನ ಹೆಚ್ಚಾಗುತ್ತದೆ. ಜೊತೆಗೆ ವ್ಯಾಪಾರೋದ್ಯಮಿಗಳು ಸಂಘಟಿತಗೊಳ್ಳಲು ವೇದಿಕೆಯಾಗುತ್ತದೆ ಎಂದು ಹೇಳಿದರು.