ಸಿದ್ದಾಪುರ, ಆ. ೧: ಮಳೆ ಬಂದಾಗ, ಪಾಕೃತಿಕ ವಿಕೋಪ ಉಂಟಾದಾಗ ಸಂತ್ರಸ್ತರ ರಕ್ಷಣೆ ಹಾಗೂ ನೆರವಿಗಾಗಿ ಜಿಲ್ಲಾಡಳಿತ, ಸ್ಥಳೀಯ ಆಡಳಿತದ ವತಿಯಿಂದ ಕಾಳಜಿ, ಪರಿಹಾರ ಕೇಂದ್ರಗಳನ್ನು ತೆರೆಯಲಾಗುತ್ತದೆ. ಅಪಾಯದ ಸ್ಥಿತಿಯಲ್ಲಿರುವವರನ್ನು ಇಂತಹ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಏನೇ ಆದರೂ ತಮ್ಮ ಮನೆ, ಮಠಗಳನ್ನು ತೊರೆದು ಬಂದು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಲ್ಲಿ ಒಂದು ರೀತಿಯ ಆತಂಕ, ದುಗುಡ ಮನೆ ಮಾಡಿರುತ್ತದೆ. ಕಣ್ಣೀರಿನ್ನಲ್ಲೆ ಕಾಲ ಕಳೆಯುವಂತಹ ಪರಿಸ್ಥಿತಿ ಇರುತ್ತದೆ.
ಆದರೆ, ಇಲ್ಲೊಂದು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಯಾವುದೇ ನೋವಾಗಬಾರದು, ತೊಂದರೆ ಆಗಬಾರದು, ಎಂದಿನAತೆಯೆ ಅವರುಗಳು ಅವರ ಮನೆಯಲ್ಲಿ ಇದ್ದ ರೀತಿಯಲ್ಲೇ ಇರಬೇಕು ಎಂಬ ಪರಿಕಲ್ಪನೆಯೊಂದಿಗೆ ಪರಿಹಾರ ಕೇಂದ್ರದಲ್ಲಿಯೇ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲಾಗಿದೆ. ತಾಲೂಕು ಆಡಳಿತ ವತಿಯಿಂದ ತೆರೆಯಲಾಗಿರುವ ಈ ಕೇಂದ್ರದಲ್ಲಿ ಎಲ್ಲರೂ ಮನೆಯ ವಾತಾವರಣದಲ್ಲಿದ್ದಾರೆ.
ಸಿದ್ದಾಪುರದ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಮಕ್ಕಳಿಗೆ ಸರಕಾರಿ ಶಾಲೆಯ ಶಿಕ್ಷಕ ವೃಂದದಿAದ ಪಾಠ ಪ್ರವಚನ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿAದ ಆರೋಗ್ಯ ತಪಾಸಣೆ, ಮನೋರಂಜನೆಗಾಗಿ ಟಿವಿ ವೀಕ್ಷಣೆ, ಇನ್ನಿತರ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಸಂತ್ರಸ್ತರು ತಮ್ಮ ಮನೆಯಲ್ಲಿರುವಂತೆ ಕಾಲ ಕಳೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ ತಗ್ಗು ಪ್ರದೇಶದ ೧೫ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಪಾಯದಲ್ಲಿರುವ ನದಿ ತೀರದ ನಿವಾಸಿಗಳಿಗೆ ಸಿದ್ದಾಪುರದ ಸ್ವರ್ಣಮಾಲಾ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು. ಇದೀಗ ಪರಿಹಾರ ಕೇಂದ್ರದಲ್ಲಿ ೬೦ಕ್ಕೂ ಅಧಿಕ ಮಂದಿ ವಾಸ ಮಾಡಿಕೊಂಡಿದ್ದಾರೆ. ಇವರುಗಳಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ತಾಲೂಕು ಆಡಳಿತದ ವತಿಯಿಂದ ನೀಡಲಾಗಿದೆ. ವಿಪರೀತ ಮಳೆ, ಗಾಳಿ ಇರುವ ಹಿನ್ನೆಲೆಯಲ್ಲಿ ಸಂತ್ರಸ್ತರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಕೇಂದ್ರವನ್ನು ಪರಿಹಾರ ಕೇಂದ್ರದಲ್ಲಿ ತೆರೆಯಲಾಗಿದ್ದು, ದಿನನಿತ್ಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಪರಿಹಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರಡಿಗೋಡು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ರುಕ್ಮಿಣಿ ಗಂಗಾಧರ್ ಹಾಗೂ ಸಿದ್ದಾಪುರ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲ ವಿಜಯ್ ಸಂತ್ರಸ್ತರ ಮಕ್ಕಳಿಗೆ ಪಾಠ ಪ್ರವಚನವನ್ನು ಶಾಲೆಯಲ್ಲಿ ಮಾಡುತ್ತಿರುವ ರೀತಿಯಲ್ಲಿ ಮಾಡುತ್ತಿರುವುದು ವಿಶೇಷವಾಗಿದೆ. ಸಂತ್ರಸ್ತರು ತಮ್ಮ ಬೇಸರವನ್ನು ಕಳೆಯಲು ಟಿವಿಯನ್ನು ಅಳವಡಿಸಿದ್ದು, ಮನೋರಂಜನಾ ಕಾರ್ಯಕ್ರಮಗಳನ್ನು ಕುಟುಂಬಸ್ಥರು ಒಂದಾಗಿ ಸೇರಿ ವೀಕ್ಷಿಸುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ತಾಲೂಕು ಆಡಳಿತದ ವತಿಯಿಂದ ಉತ್ತಮ ಆಹಾರಗಳನ್ನು ನೀಡ ಲಾಗುತ್ತಿದೆ. ತಾಲೂಕು ತಹಶೀಲ್ದಾರ್ ರಾಮಚಂದ್ರ ನೇತೃತ್ವದಲ್ಲಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಓಮಪ್ಪ ಬಣಕರ್, ಕಂದಾಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಉಪಾಧ್ಯಕ್ಷ ಪಳನಿ, ಸದಸ್ಯರುಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಂತಸ್ತರಿಗೆ ಬೇಕಾದಂತಹ ಅಗತ್ಯ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದಾರೆ. ಪರಿಹಾರ ಕೇಂದ್ರದಲ್ಲಿ ವಯಸ್ಸಾದವರು ಹಾಗೂ ಮಹಿಳೆಯರು, ಪುರುಷರು, ಮಕ್ಕಳು ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರಕ್ಕೆ ಆಗಮಿಸುತ್ತಿರುವ ಜನಪ್ರತಿನಿಧಿಗಳ ಬಳಿ ಸಂತ್ರಸ್ತರು ತಮಗೆ ಶಾಶ್ವತ ಸೂರು ಒದಗಿಸಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಮುಂದಿನ ಮಳೆಗಾಲ ಮುಂಚಿತ ವಾಗಿ ಶಾಶ್ವತ ಪರಿಹಾರ ಸರಕಾರ ಹಾಗೂ ಜಿಲ್ಲಾಡಳಿತ ಒದಗಿಸಿ ಕೊಡಬೇಕಾಗಿರುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನಾದರೂ ನದಿ ತೀರದ ನಿವಾಸಿಗಳ ನರಕದ ಜೀವನಕ್ಕೆ ಮುಕ್ತಿ ಸಿಗಲಿ ಎಂಬುದು ಗ್ರಾಮಸ್ಥರ ಅಭಿಪ್ರಾಯ ವಾಗಿದೆ. - ವರದಿ: ವಾಸು