ಮಡಿಕೇರಿ, ಆ. ೨: ಮಾಯಮುಡಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ರೋಜ್‌ಗಾರ್ ದಿನಾಚರಣೆಯನ್ನು ಆಚರಿಸಲಾಯಿತು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಆಪಟ್ಟಿರ ಎಸ್. ಟಾಟು ಮೊಣ್ಣಪ್ಪ, ಯೋಜನೆಯ ಉದ್ದೇಶದ ಬಗ್ಗೆ ತಿಳಿಸಿದರು.
ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ ೧೦೦ ದಿನಗಳಿಗಿಂತ ಕಡಿಮೆ ಇಲ್ಲದಂತೆ ಉದ್ಯೋಗವನ್ನು ನೀಡಿ ಗುಣಮಟ್ಟದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ಒಂದು ದಿನಕ್ಕೆ ರೂ. ೩೪೯ ನ್ನು ನೀಡಲಾಗುವುದು. ವಿಶೇಷಚೇತನರು ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ ಕೆಲಸದಲ್ಲಿ ಶೇ. ೫೦ ರಷ್ಟು ರಿಯಾಯಿತಿ, ಅರ್ಧ ಕೆಲಸಕ್ಕೆ ಪ್ರತಿ ಕೂಲಿ ಪಾವತಿಸಲಾಗುವುದು. ಮಹಿಳಾ ಒಕ್ಕೂಟಗಳಿಗೆ ಎನ್‌ಆರ್‌ಎಲ್‌ಎಂ ಶೆಡ್ ನಿರ್ಮಾಣಕ್ಕೆ ಅವಕಾಶವಿದ್ದು, ರೂ. ೧೭.೫೦ ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ರೈತರಿಗೆ ಹೈನುಗಾರಿಕೆಗೆ ಮನರೇಗಾ ಯೋಜನೆ ಸಹಕಾರಿಯಾಗಿದೆ. ದನದ ಕೊಟ್ಟಿಗೆ ನಿರ್ಮಾಣಕ್ಕೆ ರೂ. ೫೭ ಸಾವಿರ ನೀಡಲಾಗುವುದು. ರೈತರಿಗೆ ಎರೆಹುಳು ಗೊಬ್ಬರದ ತೊಟ್ಟಿ ನಿರ್ಮಾಣಕ್ಕೆ ೨೦ ಸಾವಿರ ರೂ.ಗಳನ್ನು ನೀಡಲಾಗುವುದು. ಕೃಷಿ ಜೊತೆಗೆ ಕೋಳಿ ಸಾಕಾಣಿಕೆಗೆ ಕೋಳಿ ಶೆಡ್ ನಿರ್ಮಾಣಕ್ಕೆ ರೂ. ೬೦ ಸಾವಿರ, ಅಂತರ್ಜಲ ಮಟ್ಟ ಹೆಚ್ಚಿಸಲು ಬಾವಿ ಮರು ನಿರ್ಮಾಣ ಘಟಕಕ್ಕೆ ೨೭ ಸಾವಿರ ರೂ., ಕಾಫಿಯೊಂದಿಗೆ ಕಾಳುಮೆಣಸು ಬೆಳೆಯಲು ೧ ಎಕರೆಗೆ ರೂ. ೧೭,೮೫೯, ಅಡಿಕೆ ಕೃಷಿ ಮಾಡಿ ಆದಾಯ ವೃದ್ಧಿಗೆ ೧ ಎಕರೆಗೆ ರೂ. ೬೭,೦೭೨, ಮಣ್ಣಿನ ಫಲವತ್ತತೆ ಹೆಚ್ಚಿಸಲು ಪಿಟ್ ನಿರ್ಮಾಣಕ್ಕೆ ರೂ. ೧೬ ಸಾವಿರ, ಬಚ್ಚಲು ಗುಂಡಿ ನಿರ್ಮಾಣಕ್ಕೆ ರೂ.೧೧ ಸಾವಿರ ನೀಡಲಾಗುವುದು. ಕೊಡಗಿನ ಹಿರಿಮೆಯಾದ ಕಿತ್ತಳೆ ಕೃಷಿಗೆ ನರೇಗಾ ನೆರವು ೧ ಎಕರೆಗೆ ರೂ. ೧೯,೫೮೪, ಕುರಿ ಅಥವಾ ಮೇಕೆ ಶೆಡ್ ನಿರ್ಮಾಣಕ್ಕೆ ೭೦ ಸಾವಿರ, ಜಮೀನಿನಲ್ಲಿ ಕೃಷಿಹೊಂಡ ನಿರ್ಮಿಸಲು ರೂ. ೧.೪೯ ಲಕ್ಷ ನೀಡಲಾಗುವುದು ಎಂದು ಟಾಟು ಮೊಣ್ಣಪ್ಪ ಮಾಹಿತಿ ನೀಡಿದರು.
ಬಿಪಿಎಲ್ ಕಾರ್ಡ್ ಹೊಂದಿರುವವರು ಇದರ ಸದುಪಯೋಗ ಪಡೆದುಕೊಳ್ಳ ಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾವಣೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಸದಪ್ಪ ಮಟಲೋಡ್, ಸಿಬ್ಬಂದಿಗಳಾದ ಟಿ.ಜಿ. ಸಚಿತಾ, ಪದ್ಮಿನಿ ಸೂದನ್ ಬಾನಂಡ, ಎನ್.ಆರ್. ಗುರು, ಅಭಿಶೇಕ್ ಮತ್ತಿತರರು ಉಪಸ್ಥಿತರಿದ್ದರು.