ಮಡಿಕೇರಿ, ಆ. ೧: ಬೆಂಗಳೂರಿನಲ್ಲಿ ನಡೆದ ಆಹ್ವಾನಿತ ಸಿಬಿಎಸ್‌ಸಿ ಶಾಲೆಗಳ ರಾಜ್ಯಮಟ್ಟದ ರಿಂಕ್ ಹಾಕಿ ಪಂದ್ಯಾಟದ ೧೬ ವರ್ಷ ವಯೋಮಿತಿಯೊಳಗಿನ ಹಾಕಿ ಪಂದ್ಯಾಟದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯ ಬಾಲಕಿಯರ ತಂಡವು ಪ್ರಥಮ ಹಾಗೂ ಬಾಲಕರ ತಂಡ ದ್ವಿತೀಯ ಸ್ಥಾನದೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಕೊಡಗು ವಿದ್ಯಾಲಯ ತಂಡದ ನಾಯಕಿ ಜಾಸ್ಮೀನ್ ಮುಂದಾಳತ್ವದಲ್ಲಿ ಮೈದಾನಕ್ಕಿಳಿದ ಬಾಲಕಿಯರ ತಂಡವು ಎಲ್ಲಾ ಪಂದ್ಯಾಟಗಳಲ್ಲೂ ಅಮೋಘ ಪ್ರದರ್ಶನ ನೀಡಿತು. ಫೈನಲ್ ಪಂದ್ಯಾಟದಲ್ಲಿ ಬೆಂಗಳೂರಿನ ಚಿನ್ಮಯ ವಿದ್ಯಾಲಯ ತಂಡವನ್ನು ೬-೩ ಗೋಲುಗಳಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿತು.
ನಾಯಕ ನಮನ್ ಮುಂದಾಳತ್ವದ ಬಾಲಕರ ತಂಡ ಕೂಡ ಲೀಗ್ ಹಂತದ ಎಲ್ಲಾ ಪಂದ್ಯಾಟಗಳಲ್ಲೂ ಉತ್ತಮ ಆಟ ಪ್ರದರ್ಶಿಸಿತು. ಆದರೆ ಫೈನಲ್ ಪಂದ್ಯದಲ್ಲಿ ಡಿ.ಪಿ.ಎಸ್. ಶಾಲಾ ತಂಡದ ವಿರುದ್ಧ ೭-೨ ಗೋಲುಗಳಿಂದ ಪರಾಭವಗೊಂಡು ದ್ವಿತೀಯ ಸ್ಥಾನ ಪಡೆದುಕೊಂಡಿತು.
೧೪ ರ ವಯೋಮಿತಿಯೊಳಗಿನ ಪಂದ್ಯಾಟದಲ್ಲಿ ಭಾಗವಹಿಸಿದ್ದ ಕೊಡಗು ವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡಗಳು ಪ್ರಶಸ್ತಿ ಸುತ್ತಿಗೇರುವಲ್ಲಿ ವಿಫಲವಾದವು.
ಕೊಡಗು ವಿದ್ಯಾಲಯ ತಂಡದ ನೀತು ಚೌಧರಿ ಹಾಗೂ ನಮನ್ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಗೆ ಭಾಜನರಾದರು. ಕೊಡಗು ವಿದ್ಯಾಲಯ ತಂಡದ ಹಾಕಿ ತರಬೇತುದಾರ ದಿನೇಶ್ ಉತ್ತಮ ಕೋಚ್ ಪ್ರಶಸ್ತಿ ಪಡೆದರು.
ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ತಲಾ ೧೧ ತಂಡಗಳು ಪಾಲ್ಗೊಂಡಿದ್ದವು.