ಮಡಿಕೇರಿ, ಆ. 1: ಶ್ರೀ ವಿನಾಯಕ ಕೊಡವಕೇರಿ, ಮಡಿಕೇರಿ ಇದರ ವಾರ್ಷಿಕ ಮಹಾಸಭೆ ಕುಡುವಂಡ ಬಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿತು.
ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರ ಪ್ರಾರ್ಥನೆಯೊಂದಿಗೆ, ಅಧ್ಯಕ್ಷರು ಸ್ವಾಗತ ಬಯಸಿದರು. ಕೇರಿಯು 20 ವರ್ಷಗಳ ಹಿಂದೆ ಸ್ಥಾಪನೆಗೊಂಡು, ಇದೀಗ 101 ಕುಟುಂಬಗಳು ಸದಸ್ಯತ್ವ ಪಡೆದಿದ್ದು, ಸದಸ್ಯರು ಕಷ್ಟ- ಸುಖಗಳಲ್ಲಿ ಪರಸ್ಪರ ಭಾಗಿಯಾಗುತ್ತಾ ಬರುತ್ತಿದ್ದು, ಮುಂದಕ್ಕೂ ಪ್ರೀತಿ, ವಿಶ್ವಾಸದಿಂದ, ಒಗ್ಗಟ್ಟಿನಿಂದ ಬದುಕುವಂತಾಗ ಬೇಕೆಂದು ಹೇಳಿದರು. ಸಾಂಪ್ರದಾಯಿಕ ಆಟ್-ಪಾಟ್, ಪದ್ಧತಿ, ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳಲು ವಿನಂತಿಸಿದರು. ನಂತರ ಕಳೆದ ಒಂದು ವರ್ಷದಲ್ಲಿ ಸ್ವರ್ಗಸ್ಥರಾದ ಕೇರಿಯ ಸದಸ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ಎಂ. ಉತ್ತಪ್ಪ ಹಿಂದಿನ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಸಭೆಯ ಮುಂದಿಟ್ಟರು. ವಾರ್ಷಿಕ ಲೆಕ್ಕಪತ್ರದ ವಿವರವನ್ನು ಖಜಾಂಚಿ ಕನ್ನಿಕಂಡ ಮೋನಿಕ ಮಂಡಿಸಿದರು. ಪಿಯುಸಿ ಹಾಗೂ ಎಂಎಸ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಇತ್ತೀಚೆಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡ ಚೊಟ್ಟೆಯಂಡ ಎ. ಸಂಜು ಕಾವೇರಪ್ಪ ಅವರನ್ನು ಸನ್ಮಾನಿಸಿ ಶುಭ ಕೋರಲಾಯಿತು.
ಕೇರಿಯ ಸಾಂಸ್ಕೃತಿಕ ಅಧ್ಯಕ್ಷ ಚೊಟ್ಟೆಯಂಡ ಕೆ. ಅಪ್ಪಾಜಿ ಮಾತನಾಡಿ, ಮುಂಬರುವ ಅಂತರಕೇರಿ ಮೇಳದಲ್ಲಿ ಸದಸ್ಯರುಗಳು ಭಾಗಿಯಾಗಿ ಆಟ್ -ಪಾಟ್, ಸಾಂಸ್ಕೃತಿಕ ಪ್ರಾಕಾರದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ವಿನಂತಿಸಿ ಕೊಂಡರು.
ವೇದಿಕೆಯಲ್ಲಿ ನಿರ್ದೇಶಕರು ಗಳಾದ ಎಳ್ತಂಡ ಕುಮಾರ್, ಕಾಂಡೆರ ಕುಟ್ಟಪ್ಪ, ನೆರವಂಡ ಅನಿತಾ ಚರ್ಮಣ, ಪಾಲಂದಿರ ಹ್ಯಾರಿ ತಿಮ್ಮಯ್ಯ, ಕೇಕಡ ಶರಿ ಕುಟ್ಟಪ್ಪ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಮಂಡೇಟಿರ ಡೇಸಿ ಮಂದಪ್ಪ ವಂದಿಸಿದರು. ಕಾರ್ಯದರ್ಶಿ ಉತ್ತಪ್ಪ ಕಾರ್ಯಕ್ರಮ ನಿರೂಪಿಸಿದರು.