ಮಡಿಕೇರಿ : ಕಳೆದ ಒಂದು ತಿಂಗಳಿನಿAದ ಸುರಿಯುತ್ತಿರುವ ಗಾಳಿ ಸಹಿತ ಮಹಾಮಳೆಗೆ ಕೊಡಗು ಜಿಲ್ಲೆ ನಲುಗಿ ಹೋಗಿದ್ದು, ಅಪಾರ ನಷ್ಟ ಅನುಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಮಳೆಹಾನಿ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ಮಂಡಲ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿಯ ವೀರಾಜಪೇಟೆ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಧಿಕ ಮಳೆಯಿಂದ ಬೆಳೆ ಮತ್ತು ಮನೆಗಳು ವ್ಯಾಪಕವಾಗಿ ಹಾನಿಗೀಡಾಗಿದ್ದು, ಸರ್ಕಾರ ತುರ್ತು ಪರಿಹಾರ ಘೋಷಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕೊಡಗಿನ ಕಾಫಿ ಬೆಳೆ ಅತಿವೃಷ್ಟಿಯಿಂದ ಸಂಪೂರ್ಣವಾಗಿ ನೆಲಕಚ್ಚಿದೆ. ಕಾಫಿ ಕಾಯಿ ಕೊಳೆತು ಉದುರುತ್ತಿದೆ. ಅನೇಕ ಭಾಗಗಳಲ್ಲಿ ಕಾಫಿ ತೋಟಗಳು ಜಲಾವೃತಗೊಂಡು ನಷ್ಟ ಉಂಟಾಗಿದೆ. ಮುಂದಿನ ವರ್ಷ ಶೇ.೨೫ ರಷ್ಟು ಫಸಲು ಕೂಡ ಕೈಸೇರುವ ಭರವಸೆ ಬೆಳೆಗಾರರಿಗೆ ಇಲ್ಲದಾಗಿದೆ.
ಸರ್ಕಾರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಬೆಳೆ ನಷ್ಟ ಮತ್ತು ಜಾನುವಾರುಗಳ ಸಾವಿನ ಬಗ್ಗೆ ಅಧ್ಯಯನ ನಡೆಸಬೇಕು. ಸೂಕ್ತ ಪರಿಹಾರ ಘೋಷಿಸುವುದರೊಂದಿಗೆ ಬೆಳೆಗಾರರ ಸಾಲಮನ್ನಾ ಮಾಡಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.