ಸೋಮವಾರಪೇಟೆ,ಆ.೨: ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಸಂಜೆ ಪಟ್ಟಣದ ಹೊರವಲಯದ ಜೇನಿಗರಕೊಪ್ಪದಲ್ಲಿ ನಡೆದಿದೆ.
ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ಸಂಜೆ ವೇಳೆಗೆ ವಾಹನದಲ್ಲಿ ಮರಳಿ ಮನೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಅವಘಡ ಸಂಭವಿಸಿದ್ದು, ಸುಮಾರು ೩೦ ವಿದ್ಯಾರ್ಥಿಗಳು ಅದೃಷ್ಟವಶಾತ್ ಪಾರಾಗಿದ್ದಾರೆ. ಘಟನೆಯಿಂದ ಓರ್ವ ವಿದ್ಯಾರ್ಥಿಯ ಕಾಲಿಗೆ ಪೆಟ್ಟಾಗಿದೆ. ಸೋಮವಾರಪೇಟೆ ಪಟ್ಟಣದಿಂದ ಕಿಬ್ಬೆಟ್ಟ, ಕಾಗಡಿಕಟ್ಟೆ, ಗೆಜ್ಜೆಹಣಕೋಡು, ಚಿಕ್ಕತೋಳೂರು ಮಾರ್ಗದಲ್ಲಿ, ಶಾಲಾ ದಿನಗಳಲ್ಲಿ ಚಲಿಸುವ ವಾಹನ ಇದಾಗಿದ್ದು, ಇಂದು ಸಂಜೆ ಜೇನಿಗರಕೊಪ್ಪದಲ್ಲಿ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರಿಗೆ ಸ್ಥಳಾವಕಾಶ ಒದಗಿಸುವ ಸಲುವಾಗಿ ಚಾಲಕ ಎಡಬದಿಗೆ ಚಾಲಿಸಿದ್ದಾನೆ.
ಮಳೆ ಹಿನ್ನೆಲೆ ರಸ್ತೆಯ ಬದಿಯಲ್ಲಿ ಕೆಸರು ಕಟ್ಟಿದ್ದು, ಶಾಲಾ ವಾಹನವನ್ನು ಎಡಬದಿಗೆ ಎಳೆದಿದೆ. ಪರಿಣಾಮ ರಸ್ತೆ ಬದಿಯ ಚರಂಡಿಗೆ ಇಳಿದ ವಾಹನ ಎಡಬದಿಗೆ ಪಲ್ಟಿಯಾಗಿದೆ. ಮಕ್ಕಳು ಹರಸಾಹಸ ಪಟ್ಟು ವಾಹನದಿಂದ ಹೊರಬಂದಿದ್ದಾರೆ. ಘಟನೆಯಿಂದ ಕೆಲ ಮಕ್ಕಳಿಗೆ ಸಣ್ಣಪುಟ್ಟ ಪೆಟ್ಟಾಗಿದೆ. ನಂತರ ಸ್ಥಳೀಯರು ವಾಹನವನ್ನು ಮೇಲೆತ್ತಿದ್ದಾರೆ.