ಸೋಮವಾರಪೇಟೆ, ಆ. ೨: ಭಾರತೀಯ ಜನತಾ ಪಾರ್ಟಿಯ ವರಿಷ್ಠರು, ವಿಧಾನ ಪರಿಷತ್ ಮಾಜಿ ಸದಸ್ಯರು, ಅಪ್ಪಾಜಿ ಎಂದೇ ಹೆಸರುವಾಸಿಯಾಗಿದ್ದ ಬಿ.ಬಿ. ಶಿವಪ್ಪ ಅವರ ೭ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯಿತು. ಬಿ.ಬಿ. ಶಿವಪ್ಪ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಬಿ. ಶಿವಪ್ಪ ಹಾಗೂ ಪತ್ನಿ ಸುಶೀಲಮ್ಮ ಅವರುಗಳ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಅವರು, ರಾಷ್ಟç ಹಾಗೂ ರಾಜ್ಯ ಕಂಡ ಶ್ರೇಷ್ಠ ವ್ಯಕ್ತಿಯಾಗಿದ್ದರು. ನಿಷ್ಕಳಂಕ, ಪ್ರಾಮಾಣಿಕ, ಜಾತಿ ವರ್ಗವನ್ನು ಮೀರಿದ ಅವರ ಆದರ್ಶ ಪಾಲನೆಯಾಗಬೇಕು. ಶಿವಪ್ಪ ಅವರು ಬಿಜೆಪಿಗೆ ನೀಡಿದ ಕೊಡುಗೆ ಅಪಾರ. ಅವರ ಪತ್ನಿಯಾಗಿದ್ದ ಸುಶೀಲಮ್ಮ ಅವರೂ ಸಹ ಪತಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಲು ಶ್ರಮಿಸಿದರು ಎಂದು ಸ್ಮರಿಸಿದರು.

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಶಿವಪ್ಪ ಅವರು ಪಕ್ಷದ ಆಸ್ತಿಯಾಗಿದ್ದರು. ಗಟ್ಟಿ ತಳಪಾಯ ಹಾಕಿದ ಪರಿಣಾಮ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬಂತು. ೧೯೮೯ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು ಸೋಮವಾರಪೇಟೆ ಕ್ಷೇತ್ರದಲ್ಲಿ ೧೯ ಸಾವಿರ ಮತ ಪಡೆದಿದ್ದರು. ಅಜಾತಶತ್ರುವಾಗಿ ರಾಜಕಾರಣ ಮಾಡಿದ ಅಪರೂಪದ ರಾಜಕಾರಣಿ ಯಾಗಿದ್ದರು. ಅವರ ಕಾರ್ಯಗಳು ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನವಾಗಬೇಕು ಎಂದರು.

ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಶಿವಪ್ಪ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜಕಾರಣದ ಮುನ್ನೆಲೆಯಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ಎ.ಕೆ. ಸುಬ್ಬಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ಬಿಜೆಪಿ ಕಥೆ ಮುಗಿಯಿತು ಎಂದೇ ಭಾವಿಸಿದ್ದರು. ಅಂತಹ ಸಂದರ್ಭದಲ್ಲಿ ಶಿವಪ್ಪ ಅವರು ಅಧ್ಯಕ್ಷರಾಗಿ ಪಕ್ಷವನ್ನು ಸಂಕಷ್ಟದ ದಿನಗಳಲ್ಲೂ ಮುನ್ನಡೆಸಿದರು ಎಂದು ಸ್ಮರಿಸಿದರು.

ಅವರು ಹಾಕಿಕೊಟ್ಟ ಆದರ್ಶಗಳಿಂದಾಗಿಯೇ ಇಂದಿಗೂ ಹಿರಿಯ ಕಾರ್ಯಕರ್ತರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಪತ್ನಿ ಸುಶೀಲಮ್ಮ ಅವರು ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ರಾಜಕಾರಣದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟವರು ಎಂದರು. ಕಾರ್ಯಕ್ರಮದಲ್ಲಿ ಶಿವಪ್ಪ ಅವರ ಅಭಿಮಾನಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಶಿವಪ್ಪ ಅವರ ಪುತ್ರ ಪ್ರತಾಪ್ ಶಿವಪ್ಪ, ಅಭಿಮಾನಿ ಬಳಗದ ತಿಮ್ಮಶೆಟ್ಟಿ ಉಪಸ್ಥಿತರಿದ್ದರು.