ಸಿದ್ದಾಪುರ, ಆ. ೩: ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಬೀಡು ಬಿಟ್ಟು ಮನೆಯಂಗಳದಲ್ಲಿ ದಾಂಧಲೆ ನಡೆಸಿ ಹೂಕುಂಡಗಳನ್ನು ಹಾಗೂ ಉತ್ತಮ ತಳಿಯ ಪಪ್ಪಾಯ ಗಿಡಗಳನ್ನು ಧ್ವಂಸಗೊಳಿಸಿರುವ ಘಟನೆ ಪುಲಿಯೇರಿ ಗ್ರಾಮದ ಇಂಜಿಲಗೆರೆಯಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಾದ ಕಂಜಿತAಡ ಅಯ್ಯಪ್ಪ ಹಾಗೂ ಕೇಳಪಂಡ ಸರಸ್ವತಿ ಅಯ್ಯಪ್ಪ ಎಂಬವರ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕಾಫಿ ತೋಟದೊಳಗೆ ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ಹಾನಿಗೊಳಿಸಿವೆ. ಅಲ್ಲದೆ ಮನೆ ಅಂಗಳಕ್ಕೆ ಲಗ್ಗೆ ಇಟ್ಟು, ಹೂಕುಂಡಗಳನ್ನು ತುಳಿದು ಧ್ವಂಸಗೊಳಿಸಿವೆ. ಉತ್ತಮ ತಳಿಯ ೨೫ಕ್ಕೂ ಅಧಿಕ ಪಪ್ಪಾಯ ಗಿಡಗಳನ್ನು ತಿಂದು, ತುಳಿದು ಹಾನಿಗೊಳಿಸಿವೆ.

ಕಾಡಾನೆಗಳ ಹಾವಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ಕಾಫಿ ತೋಟದ ವ್ಯವಸ್ಥಾಪಕ ನೆಲ್ಲಮಕ್ಕಡ ಪ್ರಕಾಶ್ ಕುಶಾಲಪ್ಪ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸಂಜೆ ಸಮಯದಲ್ಲಿ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳಗಾರರು ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ ಅಲ್ಲದೆ ನಷ್ಟಕ್ಕೊಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.